ಬೆಂಗಳೂರು: ಉಡುಪಿಯ ಮಣಿಪಾಲ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಾಧ್ಯಾಪಕರೊಬ್ಬರು ಮುಸ್ಲಿಂ ವಿದ್ಯಾರ್ಥಿಯನ್ನು ಕಸಬ್’ಗೆ ಹೋಲಿಸಿ ಉಗ್ರವಾದಿ ಎಂದು ನಿಂದಿಸಿದ್ದು ದೊಡ್ಡ ವಿಷಯವೇನಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿರುವುದು ಅವರ ಫ್ಯಾಶಿಸ್ಟ್ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರ್ ಟೀಕಿಸಿದ್ದಾರೆ.
ಈ ಕೋಮುವಾದಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಮರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರ ಇಡಲು ಹಿಜಾಬ್ ವಿಚಾರವನ್ನು ಮುನ್ನೆಲೆಗೆ ತಂದು ಆ ಮೂಲಕ ಲಕ್ಷಾಂತರ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟಿದ್ದಾಯಿತು. ಈಗ ಮುಸ್ಲಿಂ ವಿದ್ಯಾರ್ಥಿಗಳನ್ನು ಉಗ್ರವಾದಿ ಎಂದು ನಿಂದಿಸುವ ಮೂಲಕ ಅವರನ್ನು ಅವಮಾನಿಸುವ ಮತ್ತು ಆ ಮೂಲಕ ಅವರನ್ನು ಶಿಕ್ಷಣದಿಂದ ಹೊರಗಿಡುವ ಕುತಂತ್ರದ ಯೋಜನೆ ಕಾರ್ಯರೂಪಕ್ಕೆ ತರುತ್ತಿರುವಂತೆ ಕಾಣುತ್ತಿದೆ ಎಂದು ಮಜೀದ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ನಾಗೇಶ್ ಅವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು, ಅವರು ಮತ್ತು ಅವರ ಸಂಘ ಪರಿವಾರದವರನ್ನು ಗೋಡ್ಸೆಗೆ ಹೋಲಿಸಿದರೆ ಅವರಿಗೆ ಹೆಮ್ಮೆಯಾಗಬಹುದೇನೋ, ಆದರೆ ಯಾವುದೋ ಒಬ್ಬ ಉಗ್ರವಾದಿಗೆ ಮುಸ್ಲಿಮರನ್ನು ಹೋಲಿಸಿದರೆ ಮುಸ್ಲಿಮರಿಗೆ ಖಂಡಿತ ನೋವು ಮತ್ತು ಅವಮಾನ ಎರಡೂ ಆಗುತ್ತವೆ. ಸಚಿವ ನಾಗೇಶ್ ಅವರಿಗೆ ಅದು ದೊಡ್ಡ ವಿಷಯವಾಗಿ ಕಾಣದೇ ಇರಬಹುದು ಆದರೆ ಮುಸ್ಲಿಮರಿಗೆ ಅದು ಅತ್ಯಂತ ದೊಡ್ಡ ಅವಮಾನ ಎಂದು ಅವರು ಹೇಳಿದರು.
ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದಿರುವ ಅವರು, ಕಾಲೇಜು ಮಂಡಳಿ ಆ ಮತಾಂಧ ಪ್ರಾಧ್ಯಾಪಕನನ್ನು ಕೆಲಸದಿಂದ ಅಮಾನತು ಮಾಡಿದೆ ನಿಜ, ಆದರೆ ಅದು ಸಾಲದು. ಸರ್ಕಾರ ಆ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಬಿ.ಸಿ ನಾಗೇಶ್ ಅವರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೋರಬೇಕು ಎಂದು ಮಜೀದ್ ಅವರು ತಮ್ಮ ಹೇಳಿಕೆಯ ಮೂಲಕ ಒತ್ತಾಯ ಮಾಡಿದ್ದಾರೆ.