ಯಾರದ್ದೋ ದುಡ್ಡು… ಸಿದ್ದರಾಮಯ್ಯನ ಜಾತ್ರೆ : ಬೊಮ್ಮಾಯಿ

Prasthutha|

 ಚಿಕ್ಕಮಗಳೂರು: ಕಾಂಗ್ರೆಸ್ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರದಾನಿ ಮೋದಿ ನೀಡಿದ್ದು, ಅದನ್ನು ತುಂಬಿದ ಚೀಲ ಸಿದ್ದರಾಮಯ್ಯನದ್ದು. ಯಾರದ್ದೋ ದುಡ್ಡು…ಸಿದ್ದರಾಮಯ್ಯನ ಜಾತ್ರೆ ನಡೆಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

- Advertisement -

ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 75 ವರ್ಷದಲ್ಲಿ ಕಾಂಗ್ರೆಸ್ ನವರು ಕೇವಲ 25 ಲಕ್ಷ ಮನೆಗಳಿಗೆ ನೀರು ನೀಡಿದ್ದರು.  ಕುಡಿಯುವ ನೀರು ಕೊಡಲಾಗದವರು ನಮ್ಮನ್ನು ಆಳಿದ್ದರು. ನೀರು ಕೊಡದವರು ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಜನ ಪರ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ ಏನೂ ಕೆಲಸ ಮಾಡಲಿಲ್ಲ. ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದ್ದರು. ಎಸಿಬಿಯಲ್ಲಿ ಹಲವು ಕೇಸ್ ಮುಚ್ಚಿಹಾಕಿದ್ದಾರೆ. 50 ಕೇಸ್ ಗಳಿಗೆ ಬಿ-ರಿಪೋರ್ಟ್ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ಆಡಳಿತದ ವೈಖರಿ. ಚಿಕ್ಕಮಗಳೂರಿನಲ್ಲಿ‌ ಮೆಡಿಕಲ್ ಕಾಲೇಜ್ ಕಾಂಗ್ರೆಸ್ ನವರು ಯಾಕೆ ಮಾಡಲಿಲ್ಲ. ಭ್ರಷ್ಟ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತು ಹಾಕಲು ಶೃಂಗೇರಿ ಶಾರದಾಂಬೆಯ ಪುಣ್ಯ ಸ್ಥಳದಿಂದ ಸಂಕಲ್ಪ ಮಾಡೋಣ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲು ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರುವ ಸಂಕಲ್ಪ ಮಾಡಬೇಕೆಂದು ಜನರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಭೈರತಿ ಬಸವರಾಜ್, ಗೋವಿಂದ ಕಾರಜೋಳ, ಮಾಜಿ ಸಚಿವ ಡಿ.ಎನ್. ಜೀವರಾಜ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶಾಸಕರು ಸೇರಿ ಹಲವರು ಉಪಸ್ಥಿತರಿದ್ದರು.



Join Whatsapp