ಮೈಸೂರು: ಬಾಡಿಗೆ ಮನೆ ಪಡೆಯಬೇಕಾದರೆ ಕಡ್ಡಾಯವಾಗಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕೆಂದು ಮೈಸೂರು ಪೊಲೀಸರು ಬಾಡಿಗೆದಾರರಿಗೆ ಸಲಹೆ ನೀಡಿದ್ದಾರೆ.
ಮಂಗಳೂರಿನ ಆಟೋ ರಿಕ್ಷಾ ಸ್ಫೋಟದ ನಂತರ ರಾಜ್ಯದ ಭದ್ರತೆಯನ್ನು ಹೈಅಲರ್ಟ್ ಮಾಡಲು ಪೊಲೀಸರು ಮುಂದಾಗಿದ್ದು, ಮೈಸೂರು ಪೊಲೀಸರು ನಗರದಲ್ಲಿ ಬಾಡಿಗೆದಾರರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವ ಬಗ್ಗೆ ಸಲಹೆ ನೀಡಿದ್ದಾರೆ.
ಮೈಸೂರು ಪೊಲೀಸರು ಸಿದ್ಧಪಡಿಸಿರುವ ಹೊಸ ಬಾಡಿಗೆ ನೀತಿಯ ಪ್ರಕಾರ, ಯಾವುದೇ ವ್ಯಕ್ತಿಗೆ ಬಾಡಿಗೆಗೆ ಮನೆ ನೀಡುವ ಮೊದಲು ಮಾಲೀಕರು ಹತ್ತಿರದ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರ ಹೊಂದಿರಬೇಕು.
100 ರೂ. ಅರ್ಜಿ ಶುಲ್ಕದೊಂದಿಗೆ ಪೊಲೀಸ್ ಠಾಣೆಯಲ್ಲಿ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ರೂಪಿಸಬೇಕು. ಬ್ಯಾಚುಲರ್, ಕುಟುಂಬದವರು ಮತ್ತು ಪೇಯಿಂಗ್ ಗೆಸ್ಟ್(ಪಿಜಿ) ಮಾಲೀಕರಿಗೆ ಪ್ರತ್ಯೇಕ ಅರ್ಜಿಗಳಿವೆ.
ಪೊಲೀಸ್ ಆಯುಕ್ತರು ಎಲ್ಲಾ ಮಾಲೀಕರಿಗೆ ತಮ್ಮ ಬಾಡಿಗೆದಾರರ ಬಗ್ಗೆ ಠಾಣೆಯಲ್ಲಿ ಮಾಹಿತಿ ನೀಡುವಂತೆ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ಮೈಸೂರಿನಲ್ಲಿ ನಕಲಿ ದಾಖಲೆಗಳ ನೆರವಿನಿಂದ ಬಾಡಿಗೆ ಮನೆ ಪಡೆದಿದ್ದ ಹಿನ್ನೆಲೆಯಲ್ಲಿ ಈ ಹೊಸ ನೀತಿಯನ್ನು ರೂಪಿಸಲಾಗಿದೆ.