ಫಿಫಾ ವಿಶ್ವಕಪ್ | ಅರ್ಜೆಂಟೀನಾಗೆ ಮೆಕ್ಸಿಕೊ ವಿರುದ್ಧ ‘ಮಾಡು ಇಲ್ಲವೇ ಮಡಿʼ  ಪಂದ್ಯ !

Prasthutha|

ದೋಹಾ: ವಿಶ್ವಕಪ್ ಗೆಲ್ಲುವ ಫೇವರಟ್ ತಂಡವಾಗಿ ಕತಾರ್’ಗೆ ಬಂದಿಳಿದಿದ್ದ ಅರ್ಜೆಂಟೀನಾ ತಂಡ, ಇದೀಗ ಒಂದು ಪಂದ್ಯ ಸೋತರೆ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸುವ ಸಂಕಷ್ಟಕ್ಕೆ ಸಿಲುಕಿದೆ. ಶನಿವಾರ ಮಧ್ಯರಾತ್ರಿ ಲುಸೈಲ್ ಸ್ಟೇಡಿಯಂನಲ್ಲಿ ನಡೆಯವ ʻಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಮೆಕ್ಸಿಕೋ ಸವಾಲನ್ನು ಎದುರಿಸಲಿದೆ.

- Advertisement -

ಗ್ರೂಪ್ ಸಿಯ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಅನಿರೀಕ್ಷಿತ ಸೋಲು ಅನುಭವಿಸಿದ ಬಳಿಕ ಮೆಸ್ಸಿ ಪಡೆ, ಶನಿವಾರದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮೆಕ್ಸಿಕೋ ವಿರುದ್ಧ ಮೆಸ್ಸಿ ಪಡೆಗೆ ಕಾಲೆಡೆವಿದರೆ ತಾಯ್ನಾಡಿನ ವಿಮಾನವೇರಬೇಕಾಗುತ್ತದೆ. ಮೆಕ್ಸಿಕೊ –ಪೋಲೆಂಡ್ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದ್ದು, ಅರ್ಜೆಂಟೀನಾ ಪಾಲಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡಿದೆ. ಗ್ರೂಪ್ ಸಿಯಲ್ಲಿ ಎಲ್ಲಾ 4 ತಂಡಗಳು ತಲಾ 1 ಪಂದ್ಯವನ್ನಾಡಿದ್ದು, ಸೌದಿ ಅರೇಬಿಯಾ 3 ಅಂಕ ಮತ್ತು ಮೆಕ್ಸಿಕೊ –ಪೋಲೆಂಡ್ ತಂಡಗಳು ತಲಾ 1 ಅಂಕ ಸಂಪಾದಿಸಿದೆ. ಆದರೆ ಅರ್ಜೆಂಟೀನಾ ಖಾತೆ ತೆರೆದಿಲ್ಲ.

ವೃತ್ತಿ ಜೀವನದ ಕೊನೆಯ ವಿಶ್ವಕಪ್ ಆಡುತ್ತಿರುವ ಫುಟ್’ಬಾಲ್ ಮಾಂತ್ರಿಕ ಮೆಸ್ಸಿ ಪಾಲಿಗೆ ಮೆಕ್ಸಿಕೊ ವಿರುದ್ಧದ ಪಂದ್ಯ ವಿಶ್ವಕಪ್’ನ ʻಮಿನಿ ಫೈನಲ್ʼ ಎನಿಸಿದೆ. 

- Advertisement -

ಶನಿವಾರ ಮಧ್ಯಾಹ್ನ 3.30ಕ್ಕೆ ನಡೆಯುವ ಮೊದಲ ಪಂದ್ಯದಲ್ಲಿ (ಗ್ರೂಪ್ ಡಿ)  ಟ್ಯುನಿಶೀಯ – ಆಸ್ಟ್ರೇಲಿಯಾ ತಂಡಗಳು ಅಲ್ ಜನೌಬ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಆಸೀಸ್ ಪಾಲಿಗೆ ಇದು ಡೂ ಆರ್ ಡೈ ಪಂದ್ಯವೆನಿಸಿದೆ. ಸಂಜೆ 6.30ಕ್ಕೆ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಸೌದಿ ಅರೇಬಿಯಾ ತಂಡ ಸ್ಟಾರ್ ಆಟಗಾರ ಲೆವೆಂಡೋಸ್ಕಿ ಒಳಗೊಂಡ ಪೋಲೆಂಡ್ ಸವಾಲನ್ನು ಎದುರಿಸಲಿದೆ. ಬಲಿಷ್ಠ ಅರ್ಜೇಂಟೀನಾವನ್ನು ಮಣಿಸಿದ ಹುಮ್ಮಸ್ಸಿನಲ್ಲಿರುವ ಸೌದಿ, ಪೋಲಿಶ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರೆ, ಮೊದಲ ತಂಡವಾಗಿ ನಾಕೌಟ್ ಹಂತ ಪ್ರವೇಶಿಸಲಿದೆ. 

ಸ್ಟೇಡಿಯಂ 974ನಲ್ಲಿ ರಾತ್ರಿ 9.30ಕ್ಕೆ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್, ಡೆನ್ಮಾರ್ಕ್ ವಿರುದ್ಧ ಸವಾಲಿಗೆ ಸಜ್ಜಾಗಿದೆ. ತಾರಾ ಆಟಗಾರರಿಂದ ಕೂಡಿರುವ ಫ್ರಾನ್ಸ್, ಈ ಪಂದ್ಯವನ್ನು ಗೆದ್ದರೆ ಅಂತಿಮ 16ರ ಘಟ್ಟವನ್ನು ಪ್ರವೇಶಿಸಲಿದೆ.

ಶನಿವಾರದ ವೇಳಾಪಟ್ಟಿ

ಟ್ಯುನೀಷಿಯಾ vs ಆಸ್ಟ್ರೇಲಿಯಾ, ಮಧ್ಯಾಹ್ನ 3.30, ಅಲ್ ಜನೌಬ್ ಸ್ಟೇಡಿಯಂ

ಪೋಲೆಂಡ್ vs ಸೌದಿ ಅರೇಬಿಯಾ, ಸಂಜೆ 6.30, ಎಜುಕೇಶನ್ ಸಿಟಿ ಸ್ಟೇಡಿಯಂ

ಫ್ರಾನ್ಸ್ vs ಡೆನ್ಮಾರ್ಕ್ , ರಾತ್ರಿ 9.30, ಸ್ಟೇಡಿಯಂ 974

ಅರ್ಜೆಂಟೀನಾ vs ಮೆಕ್ಸಿಕೊ, ಮಧ್ಯರಾತ್ರಿ 12.30



Join Whatsapp