ಆನಂದ ತೇಲ್ತುಂಬ್ಡೆ ಜಾಮೀನಿಗೆ ಸುಪ್ರೀಂ  ಸಮ್ಮತಿ

Prasthutha|

ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಅವರಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

- Advertisement -

ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠವು ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

ನವೆಂಬರ್ 18 ರಂದು ಬಾಂಬೆ ಹೈಕೋರ್ಟ್  ಜಾಮೀನು ನೀಡಿದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸುಪ್ರೀಂ ಕೋರ್ಟ್ ಗೆ  ಅರ್ಜಿ ಸಲ್ಲಿಸಿತ್ತು.

- Advertisement -

ಎಲ್ಗಾರ್‌ ಪರಿಷತ್‌ ಸಮಾವೇಶದ ಸಂಘಟಕರಲ್ಲಿ ಒಬ್ಬರಾದ ತೇಲ್ತುಂಬ್ಡೆ ಅವರು 2018ರ ಜನವರಿ 1ರಂದು ಮಾಡಿದ ಪ್ರಚೋದನಾಕಾರಿ ಭಾಷಣವು ಗಲಭೆಗೆ ನಾಂದಿ ಹಾಡಿತ್ತು ಎಂಬುದು ಎನ್‌ಐಐ ದೂರಾಗಿದೆ. ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ (ಎಂ) ಪಕ್ಷದ ಸದಸ್ಯರಾಗಿದ್ದಾರೆ ಎಂದು ಎನ್‌ಐಎ ವಿಶೇಷ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ತೇಲ್ತುಂಬ್ಡೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಎನ್‌ಐಎ ಆರೋಪಿಸಿದಂತೆ ಯುಎಪಿಎ ಕಾಯಿದೆಯಡಿ ತೇಲ್ತುಂಬ್ಡೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂದು ಹೈಕೋರ್ಟ್‌ ಜಾಮೀನಿನ ಆದೇಶದ ವೇಳೆ ಹೇಳಿತ್ತು. ಕಾಯಿದೆಯ ಸೆಕ್ಷನ್ 38 ಮತ್ತು 39 ರ ಅಡಿಯಲ್ಲಿ (ಭಯೋತ್ಪಾದಕ ಸಂಘಟನೆಯಲ್ಲಿ ಸದಸ್ಯರಾಗಿದ್ದಕ್ಕೆ ಸಂಬಂಧಿಸಿದ) ಅಪರಾಧಗಳನ್ನು ಮಾತ್ರ ತೇಲ್ತುಂಬ್ಡೆ ಅವರ ವಿರುದ್ಧ ಮಾಡಲಾಗಿದೆ. ಈ ಕೃತ್ಯಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಇದ್ದು ಈಗಾಗಲೇ ತೇಲ್ತುಂಬ್ಡೆ ಈಗಾಗಲೇ 2 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ₹1 ಲಕ್ಷ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿರುವುದಾಗಿ ನ್ಯಾಯಾಲಯ ತಿಳಿಸಿತ್ತು.



Join Whatsapp