ಬೆಂಗಳೂರು: ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 60 ವರ್ಷ ವಯಸ್ಸಾಗಿತ್ತು. ಶುಕ್ರವಾರ ಶ್ರೀಶೈಲಪ್ಪ ಬಿದರೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಆಗಮಿಸಿದ್ದರು. ಸಭೆಯ ಆರಂಭದಲ್ಲಿಯೇ ಅವರು ವಾಂತಿ ಮಾಡಿಕೊಂಡು ಕುಸಿದು ಬಿದ್ದರು. ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.
1998ರಲ್ಲಿ ರೋಣ ಕ್ಷೇತ್ರದಿಂದ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀಶೈಲಪ್ಪ ಬಿದರೂರು, 2008ರಲ್ಲಿ ಬಿಜೆಪಿಯಿಂದ ಗದಗ ಕ್ಷೇತ್ರದಿಂದ ಶಾಸಕರಾಗಿದ್ದರು. 2023ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಣ ಅಥವಾ ಗದಗ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಶ್ರೀಶೈಲಪ್ಪ ಬಿದರೂರು ಬಯಸಿದ್ದರು. ಆದ್ದರಿಂದ ಟಿಕೆಟ್’ಗಾಗಿ ಪ್ರಯತ್ನ ನಡೆಸಿದ್ದರು.
2018ರ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಕಾರಣ 2019ರಲ್ಲಿ ಕಾಂಗ್ರೆಸ್ ಸೇರಿದ್ದ ಅವರು, ಬಿಜೆಪಿಯಲ್ಲಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದು, ನನಗೆ ಎರಡು ವರ್ಷ ಚಿಕ್ಕವರಾಗಿದ್ದ ಅವರು, ಇಂದು ಕಚೇರಿಗೆ ಬಂದಾಗ ಹೃದಯಾಘಾತಕ್ಕೊಳಗಾಗಿದ್ದರು. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನದ ಹಿನ್ನೆಲೆಯಲ್ಲಿ ಈ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.