ಏಳು ಹೈಕೋರ್ಟ್’ಗಳ ನ್ಯಾಯಾಧೀಶರ ವರ್ಗಾವಣೆಗೆ ಕೊಲಿಜಿಯಂ ಶಿಫಾರಸು

Prasthutha|

ನವದೆಹಲಿ: ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅಧ್ಯಕ್ಷತೆಯಲ್ಲಿ ಸೇರಿದ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ದೇಶದ ಉಚ್ಚ ನ್ಯಾಯಾಲಯಗಳ ಏಳು ನ್ಯಾಯಾಧೀಶರುಗಳನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಿದೆ. ಅದರಲ್ಲಿ ಜಸ್ಟಿಸ್ ನಿಖಿಲ್ ಎಸ್. ಕರಿಯೆಲ್ ಹೆಸರು ಸೇರಿಲ್ಲ.

- Advertisement -

ಆಂಧ್ರಪ್ರದೇಶದ ಹೈಕೋರ್ಟಿನ ಜಸ್ಟಿಸ್’ಗಳಾದ ಬಟ್ಟು ದೇವಾನಂದ್ ಮತ್ತು ಡಿ. ರಮೇಶ್ ಅವರನ್ನು ಕ್ರಮವಾಗಿ ಮದರಾಸು ಮತ್ತು ಅಲಹಾಬಾದ್ ಹೈಕೋರ್ಟುಗಳಿಗೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ. ತೆಲಂಗಾಣ ಹೈಕೋರ್ಟಿನ ಜಸ್ಟಿಸ್ ಲಲಿತಾ ಕನ್ನೆಗಂತಿ ಅವರನ್ನು ಕರ್ನಾಟಕ ಹೈಕೋರ್ಟಿಗೆ ಶಿಫಾರಸು ಮಾಡಲಾಗಿದೆ. 2020ರ ಮೇನಲ್ಲಿ ಜಸ್ಟಿಸ್ ಆದ ಜಸ್ಟಿಸ್ ಲಲಿತಾ ಕನ್ನೆಗಂತಿಯವರನ್ನು ಆಂಧ್ರ ಹೈಕೋರ್ಟಿನಿಂದ ಕಳೆದ ವರ್ಷ ನವೆಂಬರ್’ನಲ್ಲಿ ತೆಲಂಗಾಣ ಹೈಕೋರ್ಟಿಗೆ ವರ್ಗಾಯಿಸಲಾಗಿತ್ತು.

ತೆಲಂಗಾಣ ಹೈಕೋರ್ಟಿನ ಜಸ್ಟಿಸ್ ಗಳಾದ ಡಿ. ನಾಗಾರ್ಜುನ ಮತ್ತು ಅಭಿಷೇಕ್ ರೆಡ್ಡಿ ಅವರನ್ನು ಕ್ರಮವಾಗಿ ಮದರಾಸು ಮತ್ತು ಪಾಟ್ನಾ ಹೈಕೋರ್ಟಿಗೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ. ಮದರಾಸು ಹೈಕೋರ್ಟಿನಲ್ಲಿರುವ ಜಸ್ಟಿಸ್ ಗಳಾದ ವಿ. ಎಂ. ವೇಲುಮಣಿ ಮತ್ತು ಟಿ. ರಾಜಾ ಅವರನ್ನು ಕ್ರಮವಾಗಿ ಕೊಲ್ಕತ್ತ ಮತ್ತು ರಾಜಸ್ತಾನ ಹೈಕೋರ್ಟಿಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ. ರಾಜಾ ಅವರು ಸದ್ಯ ಮದರಾಸು ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿದ್ದು, ಸರಕಾರವು ಹಂಗಾಮಿ ಇಲ್ಲವೇ ಕಾಯಂ ಮುಖ್ಯ ನ್ಯಾಯಮೂರ್ತಿಯವರನ್ನು ನೇಮಿಸಲೂ ಕೊಲಿಜಿಯಂ ಶಿಫಾರಸು ಮಾಡಿದೆ.

- Advertisement -

ಸೆಪ್ಟೆಂಬರ್ 28ರಂದು ಒಡಿಶಾ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಎಸ್. ಮುರಳೀಧರ್ ಅವರನ್ನು ಮದರಾಸು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನೇಮಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ್ದ ಶಿಫಾರಸು ಸರಕಾರದಿಂದ ಇನ್ನೂ ಜಾರಿಗೊಂಡಿಲ್ಲ. 

ಗುಜರಾತ್ ಹೈಕೋರ್ಟಿನ ಜಸ್ಟಿಸ್ ನಿಖಿಲ್ ಎಸ್. ಕರಿಯೆಲ್ ಅವರನ್ನು ವರ್ಗಾವಣೆ ಮಾಡುವ ಪ್ರಸ್ತಾಪ ಸದ್ಯ ಇದರಲ್ಲಿ ಇಲ್ಲ. ಗುಜರಾತ್ ಹೈಕೋರ್ಟ್ ವಕೀಲರ ಬಾರ್ ಎಸೋಸಿಯೇಶನ್ ಆ ವರ್ಗಾವಣೆ ವಿರೋಧಿಸಿತ್ತು.



Join Whatsapp