►‘ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿರಬೇಕು’
ಹೊಸದಿಲ್ಲಿ: ರಾಜಕೀಯ ಪ್ರಭಾವಗಳಿಂದ ಹೊರತಾಗಿರುವ ಪ್ರಬಲ ಚುನಾವಣಾ ಆಯುಕ್ತರ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ಪ್ರಧಾನಿ ವಿರುದ್ಧ ದೂರು ಬಂದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತಹ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ’ ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಈಗ ಇರುವ ವ್ಯವಸ್ಥೆ ಅಡಿ ಯಲ್ಲಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ‘ಹೌದಪ್ಪ’ ಎನ್ನುವ ಅಧಿಕಾರಿಗಳನ್ನೇ ಆಯುಕ್ತರಾಗಿ ನೇಮಕ ಮಾಡುತ್ತವೆ. ಅಂತಹವರು ಪ್ರಧಾನಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆಯೇ? ಹೀಗಾಗಿ ಪ್ರಬಲ ಚುನಾವಣಾ ಆಯುಕ್ತರ ಅಗತ್ಯ ವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿ ಕುಮಾರ್ ಅವರು ಈ ಪೀಠದಲ್ಲಿದ್ದಾರೆ.
ಈಗ ಚಾಲ್ತಿಯಲ್ಲಿ ಇರುವ ವ್ಯವಸ್ಥೆ ಯಲ್ಲಿ ಕಾರ್ಯದರ್ಶಿ, ಮುಖ್ಯಕಾರ್ಯ ದರ್ಶಿ ದರ್ಜೆಯ ಅಧಿಕಾರಿಗಳನ್ನು ಚುನಾವಣಾ ಆಯುಕ್ತ ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡುವಂತೆ ಕೇಂದ್ರ ಸಚಿವ ಸಂಪುಟವು ಶಿಫಾರಸು ಮಾಡುತ್ತದೆ. ಆ ಶಿಫಾರಸಿನಂತೆ ರಾಷ್ಟ್ರಪತಿಯು ಆಯುಕ್ತ ರನ್ನು ನೇಮಕ ಮಾಡುತ್ತಾರೆ.
ಮುಖ್ಯ ಚುನಾವಣಾ ಆಯುಕ್ತರ ನೇಮಕ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಸಮಾಲೋಚನೆ ನಡೆಸಿ ನೇಮಕ ಮಾಡುವಂತಹ ವ್ಯವಸ್ಥೆ ಬೇಕು. ಆ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೂ ಇರಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಅರ್ಜಿಯ ವಿಚಾರಣೆ ವೇಳೆ ಪೀಠವು, ‘ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿರಬೇಕು’ ಎಂದು ಹೇಳಿತು.