ಮಂಗಳೂರು: ಸುರತ್ಕಲ್ ನ ಎನ್’ಐಟಿಕೆ ಬಳಿ ಇರುವ ಟೋಲ್’ಗೇಟ್ ಅವೈಜ್ಞಾನಿಕ, ಅಕ್ರಮ, ಅದನ್ನು ಬಂದ್ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಇತ್ತೀಚಿಗೆ ಟ್ವೀಟ್ ಮಾಡಿ ತನ್ನ ಸರ್ಕಾರದ ಸಾಧನೆ ಎಂದು ಕೊಚ್ಚಿಕೊಂಡಿದ್ದರು. ಶಾಸಕ ಭರತ್ ಶೆಟ್ಟಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಆರಂಭಿಸಿದ ಟೋಲ್’ಗೇಟ್ ನಾವು ಬಂದ್ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಟೋಲ್’ಗೇಟ್ ನಲ್ಲಿ ಇನ್ನೂ ಸುಂಕ ವಸೂಲಿ ಆಗುತ್ತಿದೆ, ಇದು ಅನಾಚಾರ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಟೋಲ್’ಗೇಟ್ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಭರತ್ ಶೆಟ್ಟಿ ಆರೋಪಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಟೋಲ್ ತಂದಿದ್ದರೆ ಆಗ ಇಲ್ಲಿ ಪ್ರಾದೇಶಿಕ ಬಿಜೆಪಿ ಅಧ್ಯಕ್ಷರಾಗಿದ್ದ ಶೆಟ್ಟಿ ಯಾಕೆ ಹೋರಾಟ ಮಾಡಿ ಅದನ್ನು ನಿಲ್ಲಿಸಲಿಲ್ಲ? ಕಡೆ ಮಟ್ಟಿಗೆ ಹೋರಾಟವಾದರೂ ಯಾಕೆ ನಡೆಸಲಿಲ್ಲ. ನಾನು ಶಾಸಕನಿದ್ದಾಗ ಹೋರಾಟ ಮಾಡಿ ಅದನ್ನು ಒಂದೂವರೆ ವರ್ಷ ಮುಂದೂಡುವಂತೆ ಮಾಡಿದ್ದೆ. ಮುಂದೆ ವಿಷಯ ಕೋರ್ಟ್ ಗೇರಿದಾಗ ಹೆದ್ದಾರಿ ಪ್ರಾಧಿಕಾರದವರು ನಮ್ಮೊಡನೆ ಸಭೆ ನಡೆಸಿ ಹೆಜಮಾಡಿ ಟೋಲ್ ಆರಂಭವಾಗುತ್ತಲೇ ಇದನ್ನು ತೆಗೆಯುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಗೆದ್ದ ಬಿಜೆಪಿಯವರು ಎರಡೂ ಕಡೆ ಹಣ ಪಡೆದು ಜನರನ್ನು ವಂಚಿಸಿದರು ಎಂದು ಮೊಯ್ದಿನ್ ಬಾವಾ ಟೀಕಾಪ್ರಹಾರ ನಡೆಸಿದರು.
ಬಂದ್ ಆಗದ ಟೋಲ್ ‘ಬಂದ್’ ಆಗಿದೆ ಎಂದು ಮೋದಿಯವರನ್ನು ನಳಿನ್ ಕಟೀಲ್ ಅವಸರದಿಂದ ಅಭಿನಂದಿಸಿದ್ದು ಯಾಕೆ? ಶಾಸಕ ಭರತ್ ಶೆಟ್ಟಿ ಇಲ್ಲಿನ ಟೋಲ್’ನ ಲಾಭದ ಪಾಲುದಾರ. ಆದ್ದರಿಂದ ಏನೂ ಮಾಡದೆ ಸುಳ್ಳು ಹೇಳುತ್ತಾ ದಿನ ದೂಡುತ್ತಿದ್ದಾರೆ. ಮಂತ್ರಿ ಸುನಿಲ್ ಕುಮಾರ್ ಸಹ ನಾಳೆ ಬಂದ್ ಎಂದು ಹೇಳಿದ್ದರು. ಆದರೆ ಯಾಕೆ ಬಂದ್ ಆಗಿಲ್ಲ. ಕೂಡಲೆ ಬಂದ್ ಮಾಡಿ ಇಲ್ಲವೇ ಪ್ರತಿಭಟನೆ ಎದುರಿಸಿ ಎಂದು ಮೊಯ್ದಿನ್ ಬಾವಾ ಹೇಳಿದರು.
ನಮ್ಮ ಕ್ಷೇತ್ರದಲ್ಲಿ 12,500 ಜನರ ಮತದಾರರ ಹೆಸರಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಎಲ್’ಒಗಳು ಮನೆಗಳಿಗೆ ಸರಿಯಾಗಿ ಬಾರದೆ ಮತದಾರರ ಪಟ್ಟಿ ಸರಿ ಆಗುವುದು ಹೇಗೆ? ಆಧಾರ್ ಕಾರ್ಡ್ ಲಿಂಕ್ ಆಗಬೇಕು. ಇಲ್ಲದಿದ್ದರೆ ನಿಮಗೆ ಓಟಿಲ್ಲ ಎಂದು ಮುಖ್ಯವಾಗಿ ಅಲ್ಪಸಂಖ್ಯಾತರನ್ನು ಹೆದರಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮೊಯ್ದಿನ್ ಬಾವಾ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸುರೇಂದ್ರ, ಸದಾಶಿವ ಶೆಟ್ಟಿ, ಬಶೀರ್ ಬೈಕಂಪಾಡಿ, ರಾಘವೇಂದ್ರ ಭಟ್, ಮಲ್ಲಿಕಾರ್ಜುನ, ಅಬ್ದುಲ್ ಸಮದ್ ಉಪಸ್ಥಿತರಿದ್ದರು.