ನವದೆಹಲಿ: ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ಗರ್ಭಿಣಿ ಬೀದಿ ನಾಯಿಯನ್ನು ಥಳಿಸಿ ಕೊಂದ ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಾಲ್ವರು ಡಾನ್ ಬಾಸ್ಕೋ ತಾಂತ್ರಿಕ ಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವೈರಲ್ ವೀಡಿಯೊಗಳೊಂದಿಗೆ ಮಹಿಳೆಯೊಬ್ಬರು ಪೊಲೀಸರಿಗೆ ನೀಡಿದ ದೂರಿನನ್ವಯ ಶನಿವಾರ ಪ್ರಕರಣ ದಾಖಲಿಸಲಾಗಿತ್ತು. 10-20 ಯುವಕರು ಗರ್ಭಿಣಿ ನಾಯಿಯನ್ನು ತಗಡಿನ ಶೆಡ್ ಗೆ ಕರೆದೊಯ್ದು ಅದು ಕೂಗುತ್ತಿದ್ದಂತೆ ಅದನ್ನು ಹೊಡೆಯುವುದನ್ನು ವೀಡಿಯೋದಲ್ಲಿ ಕಾಣಬಹುದು.
ಅಕ್ಟೋಬರ್ 30 ರಂದು ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಆಟವಾಡುವಾಗ ನಾಯಿ ನಡುವೆ ಬಂದಿದ್ದಕ್ಕೆ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.