ಬೆಂಗಳೂರು: ತಮಿಳುನಾಡು ತಂಡದ ಯುವ ಬ್ಯಾಟ್ಸ್’ಮನ್ ನಾರಾಯಣ್ ಜಗದೀಶನ್, ʻಲಿಸ್ಟ್’ ಎ ಕ್ರಿಕೆಟ್ʼನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿಯ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಜಗದೀಶನ್, 277 ರನ್’ಗಳಿಸುವ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ.
ತಮಿಳುನಾಡು ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವಿಕೆಟ್ ಕೀಪರ್- ಬ್ಯಾಟರ್ ಜಗದೀಶನ್ ಚಿನ್ನಸ್ವಾಮಿ ಮೈದಾನದಲ್ಲಿ ಬೌಂಡರಿ-ಸಿಕ್ಸರ್’ಗಳ ಸುರಿಮಳೆಗೈದರು. 141 ಎಸೆತಗಳನ್ನು ಎದರಿಸಿದ ಜಗದೀಶನ್, 25 ಬೌಂಡರಿ ಮತ್ತು 15 ಸಿಕ್ಸರ್’ಗಳ ಮೂಲಕ ಬರೋಬ್ಬರಿ 277 ರನ್’ಗಳಿಸಿ ಚೇತನ್ ಆನಂದ್ ಬೌಲಿಂಗ್’ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
ʻಲಿಸ್ಟ್ ಎ ಕ್ರಿಕೆಟ್ʼನಲ್ಲಿ ದಾಖಲಾದ ಶ್ರೇಷ್ಠ ವೈಯಕ್ತಿಕ ಮೊತ್ತ ಎಂಬ ದಾಖಲೆಯನ್ನು ಈ ಮೂಲಕ ಜಗದೀಶನ್ ತಮ್ಮದಾಗಿಸಿಕೊಂಡರು.
ʻಲಿಸ್ಟ್ ಎ ಕ್ರಿಕೆಟ್ʼನಲ್ಲಿ ಅತಿಹೆಚ್ಚು ವೈಯಕ್ತಿಕ ಮೊತ್ತ ದಾಖಲೆ ಇದುವರೆಗೂ ಇಂಗ್ಲೆಂಡ್’ನ ಅಲಿ ಬ್ರೌನ್ ಹೆಸರಲ್ಲಿತ್ತು. 2002ರ ಚೆಲ್ಟೆನ್’ಹ್ಯಾಮ್ ಮತ್ತು ಗ್ಲೌಸೆಸ್ಟರ್ ಟ್ರೋಫಿ ಪಂದ್ಯಾವಳಿಯಲ್ಲಿ ಸರ್ರೆ ತಂಡದ ಪರ ಆಡಿದ್ದ ಬ್ರೌನ್, ಗ್ಲಾಮೋರ್ಗನ್ ವಿರುದ್ಧದ ಪಂದ್ಯದಲ್ಲಿ 268 ರನ್’ಗಳಿಸಿದ್ದರು. 20 ವರ್ಷಗಳ ಬಳಿಕ ಈ ದಾಖಲೆ ಬೆಂಗಳೂರಿನ ಮೈದಾನದಲ್ಲಿ ಪತನವಾಗಿದೆ.
ʻಲಿಸ್ಟ್ ಎ ಕ್ರಿಕೆಟ್ʼನಲ್ಲಿ ಸತತ 5 ಶತಕಗಳನ್ನು ದಾಖಲಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಸೋಮವಾರ ಜಗದೀಶನ್ ತನ್ನದಾಗಿಸಿಕೊಂಡರು.
ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಜಗದೀಶನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಸಾಯ್ ಸುದರ್ಶನ್, 102 ಎಸೆತಗಳಲ್ಲಿ 154 ರನ್’ಗಳಿಸಿ ನಿರ್ಗಮಿಸಿದರು. 38. 3 ಓವರ್’ಗಳಲ್ಲಿ ಮೊದಲ ವಿಕೆಟ್ಗೆ 416 ರನ್’ಗಳಿಸಿದ ಈ ಜೋಡಿ, ಅತಿಹೆಚ್ಚು ರನ್ ಜೊತೆಯಾಟದಲ್ಲಿ ಭಾಗಿಯಾದ ದಾಖಲೆ ಬರೆಯಿತು.
ಜಗದೀಶನ್ – ಸಾಯ್ ಸುದರ್ಶನ್ ಅಮೋಘ ಇನ್ನಿಂಗ್ಸ್ ನೆರವಿನಿಂದ ತಮಿಳುನಾಡು, ನಿಗದಿತ 50 ಓವರ್ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 506 ರನ್ಗಳಿಸಿದೆ. ʻಲಿಸ್ಟ್ ಎ ಕ್ರಿಕೆಟ್ʼನಲ್ಲಿ ದಾಖಲಾದ ಅತಿಹೆಚ್ಚಿನ ಮೊತ್ತ ಇದಾಗಿದೆ.