ಅಂಡಮಾನ್: ಕಳೆದ ತಿಂಗಳು 21 ವರ್ಷದ ಯುವತಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ ಕಾರ್ಮಿಕ ಆಯುಕ್ತ ಆರ್. ಎಲ್. ರಿಷಿ ಅವರನ್ನು ಪೊಲೀಸರು ಪೋರ್ಟ್ ಬ್ಲೇರ್’ನಿಂದ ಬಂಧಿಸಿದ್ದಾರೆ.
ಅಕ್ಟೋಬರ್ 1ರಂದು ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೋರ್ಟ್ ಬ್ಲೇರ್’ನ ಅಬರ್ಡೀನ್ ಪೊಲೀಸ್ ಠಾಣೆಯಲ್ಲಿ ರಿಷಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಮುಖ್ಯ ಕಾರ್ಯದರ್ಶೀ ಜಿತೇಂದ್ರ ನರೇನ್ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಮಹಿಳೆಗೆ ಸರ್ಕಾರಿ ಕೆಲಸದ ಆಮಿಷ ಒಡ್ಡಿ ಅತ್ಯಾಚಾರ ನಡೆಸಲಾಗಿತ್ತು ಎಂದು ಆರೋಪಿಸಲಾಗಿತ್ತು.
ಈ ಮಧ್ಯೆ ಪೋರ್ಟ್ ಬ್ಲೇರ್’ನ ಸೆಷನ್ಸ್ ನ್ಯಾಯಾಲಯವು ಇಬ್ಬರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನರೇನ್ ಎಂಬವರನ್ನು ಬಂಧಿಸಲಾಗಿತ್ತು. ಸದ್ಯ ಪ್ರಕರಣದ ಆರೋಪಿಗಳಾದ ರಿಷಿ ಮತ್ತು ರಿಂಕು ಅವರು ತಲೆಮರೆಸಿಕೊಂಡಿದ್ದರು ಮತ್ತು ಅವರ ಜಾಮೀನು ಅರ್ಜಿಯನ್ನು ಪೋರ್ಟ್ ಬ್ಲೇರ್ ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲದೆ ಇವರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಅಂಡಮಾನ್ ಪೊಲೀಸರು ತಿಳಿಸಿದ್ದರು.