ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಸಂಬಂಧ ಬಂಧಿತರಾಗಿರುವ ಚಿಲುಮೆಯ ಮುಖ್ಯಸ್ಥರಾದ ಕೆಂಪೇಗೌಡ, ರವಿಕುಮಾರ್, ನಿರ್ದೇಶಕ ರೇಣುಕಾ ಪ್ರಸಾದ್, ಮ್ಯಾನೇಜರ್ ಎಚ್.ಆರ್.ಧರ್ಮೇಶ್, ಮೇಲ್ವಿಚಾರಕ ಪ್ರಜ್ವಲ್ ನನ್ನು ನಗರ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಪ್ರಕರಣದ ಮುಖ್ಯ ಸೂತ್ರಧಾರಿ, ತಲೆಮರೆಸಿಕೊಂಡಿದ್ದ ‘ಚಿಲುಮೆ’ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರನ್ನು ಹಲಸೂರು ಗೇಟ್ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದರು.
ಹಲವು ಆಯಾಮದಲ್ಲಿ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಡಿಜಿಟಲ್ ಆ್ಯಪ್ ಡೆವಲಪ್ ಮಾಡಿದವರನ್ನು ಈಗಾಗಲೇ ವಶಕ್ಕೆ ಪಡೆದು ಲ್ಯಾಪ್’ಟಾಪ್’ಗಳನ್ನು ಜಪ್ತಿ ಮಾಡಿ ವಿಚಾರಣೆ ಮುಂದುವರಿಸಲಾಗಿದೆ. ಆ್ಯಪ್’ಗೆ ಸಂಬಂಧಿಸಿದ ಸರ್ವರ್ ಡೌನ್ ಮಾಡಿರುವುದರಿಂದ ಪೂರ್ಣ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿದ್ದ ಸಮನ್ವಯ ಟ್ರಸ್ಟ್’ನ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನೊಟೀಸ್ ಜಾರಿ ಮಾಡಲಾಗಿದೆ. ನ.23ರಂದು ವಿಚಾರಣೆಗೆ ಖುದ್ದು ಹಾಜರಾಗಿ, ಸಂಗ್ರಹಿಸಿರುವ ಸಾಕ್ಷ್ಯಾಧಾರ ನೀಡಬೇಕು ಎಂದು ಸೂಚಿಸಲಾಗಿದೆ.
ನಗರದಲ್ಲಿ ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮದಂಥದ್ದೇ ಮಾದರಿಯ ಅವ್ಯವಹಾರ ಹುಬ್ಬಳ್ಳಿಯಲ್ಲಿಯೂ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕನಕಗಿರಿ ಕ್ಷೇತ್ರದಲ್ಲಿಯೂ ಸುಮಾರು 9 ಸಾವಿರ ಮತದಾರರ ಸಂಖ್ಯೆ ಕಡಿಮೆ ಆಗಿದೆ. ಬಿಜೆಪಿಯವರು ಸೋಲಿನ ಭೀತಿಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ತಿಳಿದ ನಂತರ ವಿವಿಧ ಜಿಲ್ಲೆಗಳಲ್ಲೂ ಮತದಾರರು ತಮ್ಮ ಹೆಸರು ಇದೆಯೇ ಎಂದು ಮತದಾರರ ಪಟ್ಟಿಯಲ್ಲಿ ಪರಿಶೀಲಿಸುತ್ತಿದ್ದಾರೆ.