ಮಂಗಳೂರು | ಆಟೋ ರಿಕ್ಷಾ ಸ್ಫೋಟ ಪ್ರಕರಣ: ದೊಡ್ಡ ಅನಾಹುತ ಸ್ವಲ್ಪದರಲ್ಲಿ ತಪ್ಪಿದೆ, ದೇವರಿಗೆ ಧನ್ಯವಾದ ಎಂದ ಅಲೋಕ್ ಕುಮಾರ್

Prasthutha|

ಮಂಗಳೂರು: ಆಟೋ ರಿಕ್ಷಾ ಸ್ಫೋಟ ಪ್ರಕರಣದಿಂದ ಒಂದು ದೊಡ್ಡ ಅನಾಹುತ ತಪ್ಪಿದೆ ಎನ್ನುವ ನೆಮ್ಮದಿ ಇದೆ. ಬಾಂಬ್ ಬ್ಲಾಸ್ಟ್ ಆಗಿದ್ದರೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಆ ವಿಚಾರದಲ್ಲಿ ದೇವರಿಗೆ ಧನ್ಯವಾದ ಸಲ್ಲಿಸಲೇ ಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 19ರಂದು ಸಂಜೆ 4.40ರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕ, ಆಟೋ ಚಾಲಕನಿಗೆ ಗಾಯಗಳಾಗಿವೆ. ತಕ್ಷಣ ಪೊಲೀಸ್ ಅಧಿಕಾರಿಗಳಿಂದ ಗುರುತು ಪತ್ತೆ ಮಾಡುವ ಕೆಲಸ ನಡೆದಿದ್ದು, ಆರೋಪಿ ಬಳಿ ಪ್ರೇಮರಾಜ್ ಎಂಬ ಹೆಸರಿನ ಆಧಾರ್ ಕಾರ್ಡ್ ಸಿಕ್ಕಿತ್ತು. ಪ್ರೇಮರಾಜ್ ಅವರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ನನಗೂ, ಘಟನೆಗೂ ಸಂಬಂಧವಿಲ್ಲ, ನನ್ನ ಆಧಾರ್ ಕಾರ್ಡ್ ಕಳವಾಗಿತ್ತು ಎಂದು ತಿಳಿಸಿದ್ದರು. ಸ್ವತಃ ನಾನೇ ಪ್ರೇಮ್’ರಾಜ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.


ಸ್ಫೋಟದ ವೇಳೆ ಗಾಯಗೊಂಡಿದ್ದ ಶಾರೀಕ್’ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸಂಬಂಧಿಕರು ಬಂದು ಗುರುತು ಪತ್ತೆ ಹಚ್ಚಿದ್ದಾರೆ. ಈತ ಮೈಸೂರಿನ ಮೋಹನ್ ಕುಮಾರ್ ಎಂಬುವರ ಮನೆಯಲ್ಲಿ ವಾಸವಿದ್ದ. ಆತ ವಾಸವಿದ್ದ ಮನೆಯಲ್ಲಿ ಹಲವು ಸ್ಫೋಟಕ ವಸ್ತುಗಳು ಸಿಕ್ಕಿವೆ ಎಂದು ಹೇಳಿದ್ದಾರೆ.

- Advertisement -


ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶಾರೀಕ್ ಆಗಸ್ಟ್ 15, 2022 ರ ಶಿವಮೊಗ್ಗ ಗಲಾಟೆ ಬಳಿಕ ಅಲರ್ಟ್ ಆಗಿದ್ದ. ಅವನು ಅಗಸ್ಟ್ 23ರ ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಕೊಯಮತ್ತೂರು, ತಮಿಳುನಾಡು, ಕೇರಳ ಎಲ್ಲಾ ಸುತ್ತಾಡಿ ಮೈಸೂರಿಗೆ ಬಂದಿದ್ದ. ಅಲ್ಲಿ ರೂಂ ಮಾಡಿ ಮೊಬೈಲ್ ತಯಾರಿ ಇನ್ಸ್’ಸ್ಟಿಟ್ಯೂಟ್ ನಲ್ಲಿ ಕೆಲಸ ಮಾಡುತ್ತಿದ್ದ. ನಮಗೆ ಮತ್ತೆ ಅವನ ಫೋಟೋ ನೋಡಿ ಶಾರೀಕ್ ಎಂದು ತಿಳಿಯಿತು. ಆದರೂ ಅವರ ಮನೆಯವರನ್ನು ಕರೆಸಿ ಗುರುತು ಪತ್ತೆ ಮಾಡಿದ್ದೇವೆ, ಈಗ ಆತ ಶಾರೀಕ್ ಎಂಬುದು ದೃಢವಾಗಿದೆ ಎಂದರು.


2020ರಲ್ಲಿ ಮಂಗಳೂರಿನಲ್ಲಿ ಗೋಡೆ ಬರಹ ಕೇಸ್ ಆಗಿತ್ತು. ಅದರಲ್ಲಿ ಶಾರೀಕ್ ಮೇಲೆ ಯುಎಪಿಎ ಆಕ್ಟ್ ನಡಿ ಕೇಸ್ ಆಗಿದೆ. A1 ಆರೋಪಿ ಶಾರೀಕ್ ಆಗಿದ್ದ, ಆಗಲೇ ಮನೆಯವರು ಬುದ್ದಿ ಹೇಳಿದ್ದಾರಂತೆ. ಶಿವಮೊಗ್ಗದಲ್ಲಿ ಜಬೀವುಲ್ಲ ಕೇಸ್ ವಿಚಾರಣೆ ವೇಳೆ ಇವರ ಮಾಹಿತಿ ಗೊತ್ತಾಯ್ತು. ಮುನೀರ್ ಬಂಧನ ಬಳಿಕ ಶಾಕೀರ ಟ್ರಾಯಲ್ ಬ್ಲಾಸ್ಟ್ ಮಾಡಿದ್ದು ಗೊತ್ತಾಗಿದೆ. ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ ಇದರ ಮೈನ್ ಹ್ಯಾಂಡ್ಲರ್ ಆಗಿದ್ದಾನೆ. ಅವನು ತಲೆಮರೆಸಿಕೊಂಡಿದ್ದು, ಆತನ ಸುಳಿವು ನೀಡಿದವರಿಗೆ ಎನ್ ಐಎ ಎರಡು ಲಕ್ಷ ರಿವಾರ್ಡ್ ಘೋಷಣೆ ಮಾಡಿದೆ. ಇಡೀ ಪ್ರಕರಣವನ್ನು ಭೇದಿಸಲು ಕೆಲವು ತಂಡಗಳನ್ನು ರಚಿಸಲಾಗಿದೆ. ಮಂಗಳೂರು ಮತ್ತು ಮೈಸೂರು ಪೊಲೀಸ್ ಆಯುಕ್ತರ ತನಿಖೆ ಮುಂದುವರೆಯುತ್ತದೆ ಎಂದರು.



Join Whatsapp