ಕತಾರ್‌ ವಿಶ್ವಕಪ್‌ ಟೂರ್ನಿಗೆ ವರ್ಣರಂಜಿತ ಚಾಲನೆ; ಮಾರ್ಸೆಲ್ ಡೆಸೈಲಿಯಿಂದ ಟ್ರೋಫಿ ಅನಾವರಣ

Prasthutha|

ಕತಾರ್‌ ವಿಶ್ವಕಪ್‌ ಟೂರ್ನಿಗೆ ಅದ್ಧೂರಿ ಚಾಲನೆ ದೊರೆತಿದೆ. ರಾಜಧಾನಿ ದೋಹಾದಿಂದ 40 ಕಿಮೀ ಉತ್ತರದ ಅಲ್‌ ಖೋರ್‌ ನಗರದಲ್ಲಿರುವ ಅಲ್ ಬೈತ್‌ ಕ್ರೀಡಾಂಗಣದಲ್ಲಿ, ರಂಗುರಂಗಿನ ಬೆಳಕು, ಸಂಗೀತ, ಅರಬ್‌ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮಗಳು, 22ನೇ ಫಿಫಾ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿದ್ದವು.

- Advertisement -

2002ರ ವಿಶ್ವಕಪ್‌ನಲ್ಲಿ ಫ್ರಾನ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಮಾರ್ಸೆಲ್ ಡೆಸೈಲಿ, ವಿಶ್ವಕಪ್‌ ಟ್ರೋಫಿಯನ್ನು ಮೈದಾನಕ್ಕೆ ತರುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಬಳಿಕ ಆತಿಥೇಯ ರಾಷ್ಟ್ರದ ಸಾಧನೆಗಳನ್ನು ಜಗತ್ತಿಗೆ ಪರಿಚಯಿಸುವ ವಿಡಿಯೋವೊಂದನ್ನು ಪ್ರಸಾರ ಮಾಡಲಾಯಿತು. ಹಾಲಿವುಡ್‌ ದಿಗ್ಗಜ ಮೋರ್ಗನ್ ಫ್ರೀಮನ್ ಮತ್ತು ದಕ್ಷಿಣ ಕೊರಿಯಾದ ಪ್ರಸಿದ್ಧ ಬ್ಯಾಂಡ್‌ ತಂಡ ಬಿಟಿಎಸ್‌ನ ಜನಪ್ರಿಯ ಸದಸ್ಯ  ಜಂಗ್ ಕುಕ್ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೈದಾನದಲ್ಲಿ ಸೇರಿದ್ದ 50 ಸಾವಿರಕ್ಕೂ ಅಧಿಕ ಫುಟ್‌ಬಾಲ್‌ ಅಭಿಮಾನಿಗಳ ಮನಸೂರೆಗೊಂಡಿತು. ಸರ್ವರೂ ಸಮಾನರು ಎಂಬ ಸಂದೇಶ ಸಾರುವ ಖುರ್‌ಆನ್‌ ವಚನವೂ (ಸೂರಾ ಅಲ್-ಹುಜುರಾತ್ 13) ಮೊಳಗಿತು.

ಜಂಗ್ ಕುಕ್ ಕಾರ್ಯಕ್ರಮದ ಬಳಿಕ , ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು,  ತಮ್ಮ ರಾಷ್ಟ್ರದಲ್ಲಿ ಆಯೋಜಿಸಲಾಗಿರುವ ಈ ಮಹಾ ಕ್ರೀಡಾ ಮಹೋತ್ಸವಕ್ಕೆ ಜಗತ್ತಿನ ಎಲ್ಲಾ ಜನರನ್ನು ಸ್ವಾಗತಿಸುವುದಾಗಿ ತಿಳಿಸಿದರು.

- Advertisement -

ಈ ನಡುವೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ 32 ತಂಡಗಳ ಪ್ರತಿನಿಧಿಗಳು ತಮ್ಮ ರಾಷ್ಟ್ರಧ್ವಜದೊಂದಿಗೆ ಪಥಸಂಚಲನದಲ್ಲಿ ಭಾಗಿಯಾದರು. 2010ರ ವಾಕ ವಾಕ', 2014ರ ಓಲೆ ಓಲೆ’ ಸೇರಿದಂತೆ ಇದುವರೆಗಿನ ವಿಶ್ವಕಪ್‌ ಟೂರ್ನಿಗಳ ಅಧಿಕೃತ ಗೀತೆಗಳಿಗೆ ಕಲಾವಿದರು ಹೆಜ್ಜೆ ಹಾಕಿದರು. ಕತಾರ್‌ ವಿಶ್ವಕಪ್‌ನ ಅಧಿಕೃತ ಲಾಂಛನ ʻಲಾಯಿಬ್‌ʼನ ದೊಡ್ಡ ಕಲಾಕೃತಿಯು ವರ್ಣಚಿತ್ತಾರಗಳ ನಡುವೆ ಆಕರ್ಷಕವಾಗಿ ಕಂಡುಬಂತು.

ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಸೇರಿದಂತೆ ವಿಶ್ವದ ಹಲವು ಗಣ್ಯರು ಉದ್ಘಾಟನಾ ಸಮಾರಂಭದ ವೇಳೆ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದ ಕೊನೆಯಲ್ಲಿ ಸುಡುಮದ್ದು ಪ್ರದರ್ಶನ, ಆಕಾಶದಲ್ಲಿ ಬಣ್ಣಗಳ ಚಿತ್ತಾರ ಮೂಡಿಸಿತು.



Join Whatsapp