ಮಂಗಳೂರು: ಮಂಗಳೂರಿನ ಹೊರ ವಲಯದ ಗರೋಡಿಯಲ್ಲಿ ಆಟೋದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನ ಆಧಾರ್ ಕಾರ್ಡ್ ಸೇರಿದಂತೆ ಹಲವಾರು ವಸ್ತುಗಳು ಪೊಲೀಸರು ಲಭಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಮೈಸೂರು ಸಮೀಪದ ಲೋಕನಾಯಕ ನಗರದಲ್ಲಿ ಮೋಹನ್ ಕುಮಾರ್ ಎಂಬವರ ಕಟ್ಟಡದಲ್ಲಿ ಪ್ರೇಮ್ ರಾಜ್ ಎಂಬಾತನ ಹೆಸರಿನಲ್ಲಿ ಬಾಡಿಗೆ ಕೊಠಡಿಯನ್ನು ಪಡೆಯಲಾಗಿದ್ದು, ಮೂಲತಃ ಈತ ಹುಬ್ಬಳ್ಳಿಯ ವಿಳಾಸವನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಸ್ಫೋಟ ನಡೆದ ಸ್ಥಳದಲ್ಲಿ ಈತನ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಇದರ ಜಾಡು ಹಿಡಿದು ಹೋದ ಪೊಲೀಸರಿಗೆ ಆತನ ಕೊಠಡಿಯಲ್ಲಿ ಸ್ಫೋಟಕ್ಕೆ ಬಳಸುವ ಸರ್ಕೀಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ಮರದಹೊಟ್ಟು, ಅಲ್ಯುಮಿನಿಯಂ, ಮಲ್ಟಿಮೀಟರ್, ವೈರ್ಗಳು, ಮಿಕ್ಸರ್ ಜಾರ್ಗಳು, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವಾರು ವಸ್ತುಗಳ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಪ್ರೇಮ್ ರಾಜ್ ಎಂಬಾತನ ಹೆತ್ತವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ಸ್ಫೋಟಕ್ಕೂ ತಮ್ಮ ಮಗನಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಪ್ರೇಮ್’ರಾಜ್’ನ ಆಧಾರ್ ಕಾರ್ಡ್ 6 ತಿಂಗಳ ಹಿಂದೆ ಕಳೆದು ಹೋಗಿತ್ತು ಎಂದು ಆತನ ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಪೊಲೀಸರು ಮಂಗಳೂರು ಸ್ಫೋಟದ ತನಿಖೆಯನ್ನು ಚುರುಕುಗೊಳಿಸಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.