ಭೋಪಾಲ್: ಭಾರತ್ ಜೋಡೋ ಯಾತ್ರೆಯ ಪ್ರಯುಕ್ತ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರ ಭದ್ರತೆಯ ಮೇಲ್ವಿಚಾರಣೆ ನೋಡಿಕೊಳ್ಳುವುದು ಮಧ್ಯಪ್ರದೇಶದ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರು ಇಂದೋರ್ ನಲ್ಲಿ ಬಾಂಬ್ ಸ್ಫೋಟಿಸಿ ಕೊಲೆ ನಡೆಸುವುದಾಗಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಈ ತಿಂಗಳ 28ರಂದು ಖಾಲ್ಸಾ ಮೈದಾನದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸದಿದ್ದರೆ ಇಂದೋರ್’ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಅನಾಮಧೇಯ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. 1984ರ ಸಿಖ್ ವಿರೋಧಿ ಹಿಂಸಾಚಾರವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರನ್ನು ಹತ್ಯೆ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ನರೋತ್ತಮ್ ಮಿಶ್ರಾ, ಮಧ್ಯ ಪ್ರದೇಶದ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವುದು ಸರ್ಕಾರದ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಅವರ ಭದ್ರತೆಯನ್ನು ಬಿಗಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.