ಕೃಷಿ ಇಲಾಖೆ ಜತೆ ರೇಷ್ಮೆ ಇಲಾಖೆ ವಿಲೀನ ಇಲ್ಲ: ಸಚಿವ ನಾರಾಯಣ ಗೌಡ ಸ್ಪಷ್ಟನೆ

Prasthutha|

ಬೆಂಗಳೂರು: ಕೃಷಿ ಇಲಾಖೆ ಜತೆ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದನ್ನು ಪರಿಶೀಲಿಸಿದ್ದು, ಯಥಾಸ್ಥಿತಿ ಕಾಪಾಡಲು ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದ್ದಾಗಿ ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಅವರು ಪತ್ರ ಬರೆದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಧನ್ಯವಾದವನ್ನು ಹೇಳುವುದಾಗಿ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಧನ್ಯವಾದ ತಿಳಿಸಿದ್ದಾರೆ.

- Advertisement -

ರಾಜ್ಯ ಸರ್ಕಾರವು ರೇಷ್ಮೆ ಇಲಾಖೆಯನ್ನು ವಿಲೀನ ಮಾಡಿದ್ದೇ ಆದರೆ, ರೇಷ್ಮೆ ಬೆಳಗಾರರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ಇದು ರೈತರಿಗೆ ಮಾರಕವಾದ ಕ್ರಮ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಅವರಿಗೆ ಪತ್ರ ಬರೆದು ಸಮಸ್ಯೆಗಳ ಬಗ್ಗೆ ವಿವರವಾಗಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ದಿನೇಶ್ ಗೂಳಿಗೌಡ ಅವರಿಗೆ ಪತ್ರ ಬರೆದಿರುವ ರೇಷ್ಮೆ ಸಚಿವರು, ಯಥಾಸ್ಥಿತಿ ಕಾಪಾಡುವ ಬಗ್ಗೆ ಪರಿಶೀಲನೆ ನಡೆಸಿ, ಯಥಾಸ್ಥಿತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ರಾಜ್ಯದ ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯನ್ನೇ ಅವಲಂಬಿಸಿರುವ ಲಕ್ಷಾಂತರ ರೈತ ಕುಟುಂಬಗಳು ಹಾಗೂ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಈ ಮೂರು ಇಲಾಖೆಗಳ ವಿಲೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಹಾಗೂ ರೇಷ್ಮೆ ಇಲಾಖೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕೆಂದು ಹಾಗೂ ರೇಷ್ಮೆ ಕೃಷಿ ಪದವಿ ಪಡೆದು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು ಮತ್ತು ರೇಷ್ಮೆ ಬೆಳೆಯ ಅಭಿವೃಧ್ಧಿಗೆ ವಿಶೇಷವಾದ ಅನುದಾನವನ್ನು ಬಿಡುಗಡೆ ಮಾಡಿ ರೈತರ ಸಂಕಷ್ಟವನ್ನು ನಿವಾರಿಸಲು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ರೇಷ್ಮೇ ಬೆಳೆಗಾರರ ಪರವಾಗಿ ಕೋರುತ್ತೇನೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರೇಷ್ಮೆ ಸಚಿವ ನಾರಾಯಣ ಗೌಡ ಅವರಿಗೆ ಪತ್ರ ಬರೆದು ಕೋರಿದ್ದರು.

- Advertisement -

ರೇಷ್ಮೆ ಬೆಳೆಗಾರರ ಸಂಕಷ್ಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಶಾಸಕ ದಿನೇಶ್ ಗೂಳಿಗೌಡ ಅವರ ಮನವಿಗೆ ಸ್ಪಂದಿಸಿರುವ ಸರ್ಕಾರವು ಈಗ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.



Join Whatsapp