ದೋಷಿಗಳು ಮೇಲ್ಮನವಿ ಸಲ್ಲಿಸಿದರೆ ಕ್ಷಮಾದಾನಕ್ಕೆ ಅರ್ಹರಾಗುವುದಿಲ್ಲ ಎಂಬ ಕಾನೂನು ಇಲ್ಲ: ಹೈಕೋರ್ಟ್‌

Prasthutha|

ಬೆಂಗಳೂರು: “ಅಪರಾಧಿ ಮತ್ತು ಆತನ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಲು ಬಯಸದಿದ್ದರೆ, ಅದಕ್ಕೆ ಪೂರಕವಾಗಿ ಅಪರಾಧಿ ಮತ್ತು ಆತನ ಕುಟುಂಬ ಸದಸ್ಯರಿಂದ ಅಗತ್ಯವಾದ ಅಫಿಡವಿಟ್‌ ಪಡೆದು ಸಲ್ಲಿಸಬೇಕು. ಮೇಲ್ಮನವಿ ಸಲ್ಲಿಸಿದರೆ ಅಂಥವರು ಕ್ಷಮಾದಾನಕ್ಕೆ ಅರ್ಹರಾಗುವುದಿಲ್ಲ ಎಂದು ಹೇಳಿರುವ ಯಾವುದೇ ಕಾನೂನು ಇಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ.

- Advertisement -

ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳು ಎಂದು ಜೀವಾವಧಿ ಶಿಕ್ಷೆ ವಿಧಿಸಿ ಧಾರವಾಡದ ಪ್ರಧಾನ ಜಿಲ್ಲಾ ನ್ಯಾಯಾಲಯವು 2019ರ ಜೂನ್‌ನಲ್ಲಿ ತೀರ್ಪು ನೀಡಿತ್ತು. ಇದಾದ ಸುಮಾರು ಎರಡು ವರ್ಷಗಳ ಬಳಿಕ ಎರಡನೇ ಆರೋಪಿ ಶಂಕರಪ್ಪ ಪರವಾಗಿ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಕಾಲತ್ತು ಹಾಕಿದ್ದ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿದಾರರ ಪರವಾಗಿ ಅಮಿಕಸ್‌ ಕ್ಯೂರಿಯನ್ನು ನೇಮಿಸಿತ್ತು. ಇದೇ ಪ್ರಕರಣದಲ್ಲಿ ಮೊದಲ ಅಪರಾಧಿಯ ಪರವಾಗಿ ಮೇಲ್ಮನವಿ ಸಲ್ಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ಪೀಠವು ಹಲವು ಮಹತ್ವದ ನಿರ್ದೇಶನಗಳನ್ನು ನೀಡಿ, ಅವುಗಳನ್ನು ಪಾಲಿಸುವಂತೆ ಆದೇಶ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ನ್ಯಾಯಾಲಯಕ್ಕೆ ಹಲವು ವರದಿಗಳನ್ನು ಸಲ್ಲಿಸಲಾಗಿದೆ. ಅವುಗಳಲ್ಲಿನ ಪ್ರಮುಖ ಅಂಶಗಳು ಇಂತಿವೆ.

• ಹಲವು ಪ್ರಕರಣಗಳಲ್ಲಿ ದೋಷಿಗಳ ಪರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ)/ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು (ಡಿಎಲ್‌ಎಸ್‌ಎ) ಉಚಿತವಾಗಿ ಕಾನೂನು ಸೇವೆ ನೀಡುವ ಮೂಲಕ ಮೇಲ್ಮನವಿ ಸಲ್ಲಿಸಿವೆ. ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಲಾಗಿರುವಂತೆ ದೋಷಿಗಳ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಎಸ್‌ಎಲ್‌ಎಸ್‌ಎ ಮತ್ತು ಡಿಎಲ್‌ಎಸ್‌ಎ ಅಧಿಕಾರಿಗಳು ಕೈಗೊಂಡಿರುವ ಕೆಲಸಕ್ಕೆ ಪೀಠವು ಮೆಚ್ಚುಗೆಯನ್ನು ಅಧಿಕೃತವಾಗಿ ಸೂಚಿಸುತ್ತಿದೆ.
• ಕೆಲವು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ದೋಷಿಗಳು ಬಯಸುತ್ತಿಲ್ಲ. ಅಭಿಪ್ರಾಯ ವ್ಯಕ್ತಪಡಿಸಿರುವ ವಿಭಾಗದಲ್ಲಿ ಜೈಲಿನ ಅಧಿಕಾರಿಗಳು ದೋಷಿಯ ಹಕ್ಕಿನ ಬಗ್ಗೆ ಮಾರ್ಗದರ್ಶನ ಮಾಡಿದರೂ ಏತಕ್ಕಾಗಿ ದೋಷಿಗಳು ಮೇಲ್ಮನವಿ ಸಲ್ಲಿಸಲು ಬಯಸುತ್ತಿಲ್ಲ ಎಂಬುದನ್ನು ಉಲ್ಲೇಖಿಸಲಾಗಿಲ್ಲ. ದೋಷಿಗೆ ಮೇಲ್ಮನವಿ ಸಲ್ಲಿಸುವ ಹಕ್ಕಿನ ಕುರಿತು ವಿವರಿಸಬೇಕು. ಅದಾಗ್ಯೂ ಅವರು ಮೇಲ್ಮನವಿ ಸಲ್ಲಿಸಲು ಬಯಸದಿದ್ದರೆ ಅದರ ಕುರಿತು ದೋಷಿ ಮತ್ತು ಕುಟುಂಬ ಸದಸ್ಯರು ನೀಡುವ ಕಾರಣಗಳನ್ನು ಉಲ್ಲೇಖಿಸಿ, ಅಫಿಡವಿಟ್‌ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಸೂಕ್ತ ವರದಿಯನ್ನು ಸಲ್ಲಿಸಬೇಕು.
• ಹಲವು ಪ್ರಕರಣಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ವಿಭಾಗದಲ್ಲಿ ಮೇಲ್ಮನವಿ ಸಲ್ಲಿಸಲು ದೋಷಿಗಳು ಇಚ್ಛೆ ಹೊಂದಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಸೂಕ್ತವಾದ ಕಾರಣ ನೀಡಲಾಗಿಲ್ಲ. ಸದರಿ ಪ್ರಕರಣಗಳಲ್ಲಿ ಏತಕ್ಕಾಗಿ ಮೇಲ್ಮನವಿ ಸಲ್ಲಿಸಲಾಗಿಲ್ಲ ಎಂಬುದರ ಕುರಿತು ಅನುಪಾಲನಾ ವರದಿ ಸಲ್ಲಿಸಬೇಕು.
• ಕೆಲವು ಪ್ರಕರಣಗಳಲ್ಲಿ ʼಬಾಕಿ ಪ್ರಕರಣʼ ಎಂದು ಉಲ್ಲೇಖಿಸಲಾಗಿದೆ. ಹಾಗೆಂದರೆ ಏನೂ ಎಂದು ಸ್ಪಷ್ಟಪಡಿಸಲಾಗಿಲ್ಲ. ಬಾಕಿ ಪ್ರಕರಣಗಳ ಕುರಿತ ಉಲ್ಲೇಖವನ್ನು ಸ್ಪಷ್ಟವಾಗಿ ವಿವರಿಸಬೇಕು. ದೋಷಿಯ ವಿರುದ್ಧ ಪ್ರತ್ಯೇಕ ಪ್ರಕರಣ ಬಾಕಿ ಇದೆ ಎಂದಾದರೆ ಆ ಪ್ರಕರಣವು ಹಾಲಿ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಅಡ್ಡಿಯಾಗದು.
• ಕೆಲವು ಪ್ರಕರಣಗಳ ಮುಂದೆ ʼಒಂದು, ಎರಡು ಮತ್ತು ಮೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ದೋಷಿʼ ಇತ್ಯಾದಿ ಎಂದು ಉಲ್ಲೇಖಿಸಲಾಗಿದೆ. ಈ ಷರಾದಿಂದ ಮೇಲ್ಮನವಿ ಸಲ್ಲಿಸಲಾಗಿದೆಯೋ ಇಲ್ಲವೋ, ಈ ಷರಾದ ಅರ್ಥವೇನು ಎಂಬುದು ಸ್ಪಷ್ಟವಾಗಿಲ್ಲ. ಮತ್ತೊಂದು ಪ್ರಕರಣದಲ್ಲೂ ದೋಷಿಯಾಗಿದ್ದಾರೆ ಎಂಬುದು ಅದರ ಅರ್ಥವಾದರೆ ಹಾಲಿ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಅಡ್ಡಿಯಾಗುವುದಿಲ್ಲ. ಪ್ರತಿ ಪ್ರಕರಣದಲ್ಲಿ ದೋಷಿ ಎಂದು ಘೋಷಿತವಾಗಿರುವುದನ್ನು ಪ್ರತ್ಯೇಕವಾಗಿ ಪರಿಗಣಿಸಿ, ಪ್ರತ್ಯೇಕ ಮೇಲ್ಮನವಿ ಸಲ್ಲಿಸಬೇಕು.
• ಉಚಿತ ಕಾನೂನು ನೆರವಿನ ಕುರಿತು ಮಾಹಿತಿ ನೀಡಿದ ಹೊರತಾಗಿಯೂ ಮೇಲ್ಮನವಿ ಸಲ್ಲಿಸಲು ಕೆಲವರು ಬಯಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಹೀಗಿದ್ದಾಗ ದೋಷಿ ಮತ್ತು ಅವರ ಕುಟುಂಬ ಸದಸ್ಯರಿಂದ ಅಗತ್ಯವಾದ ಅಫಿಡವಿಟ್‌ ಪಡೆದು, ಸಕಾರಣಗಳನ್ನು ಒಳಗೊಂಡ ಅಫಿಡವಿಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
• ಶೇ. 70ರಷ್ಟು ಶಿಕ್ಷೆಯ ಪ್ರಮಾಣ ಪೂರ್ಣಗೊಳಿಸಿರುವುದರಿಂದ ದೋಷಿಯು ಮೇಲ್ಮನವಿ ಸಲ್ಲಿಸಲು ಇಚ್ಛೆ ಹೊಂದಿಲ್ಲ. ಅವರು ಅವಧಿಪೂರ್ವ ಬಿಡುಗಡೆಗೆ ಅರ್ಹವಾಗಿದ್ದಾರೆ ಎಂದು ಹೇಳಲಾಗಿದೆ. ಅವಧಿಪೂರ್ವ ಬಿಡುಗಡೆ ವಿಚಾರವು ಮೇಲ್ಮನವಿ ಸಲ್ಲಿಸುವುದನ್ನು ಆಧರಿಸುವುದಿಲ್ಲ. ಮೇಲ್ಮನವಿ ಸಲ್ಲಿಸುವುದು ಅವಧಿಪೂರ್ವ ಬಿಡುಗಡೆಗೆ ಅಡ್ಡಿಯಾಗದು. ಈ ಕುರಿತು ದೋಷಿ ಮತ್ತು ಅವರ ಕುಟುಂಬ ಸದಸ್ಯರಿಗೆ ವಿವರಿಸಬೇಕು. ಅದಾಗ್ಯೂ, ಅವರು ಮೇಲ್ಮನವಿ ಸಲ್ಲಿಸಲು ಬಯಸದಿದ್ದರೆ, ದೋಷಿ ಮತ್ತು ಕುಟುಂಬ ಸದಸ್ಯರ ಅಭಿಪ್ರಾಯವನ್ನು ಒಳಗೊಂಡ ವಿಚಾರವನ್ನು ಅಫಿಡವಿಟ್‌ನಲ್ಲಿ ಸಲ್ಲಿಸಬೇಕು.
• ʼದೋಷಿಯು ಶಿಕ್ಷೆ ಪೂರ್ಣಗೊಳಿಸಲು ಬಯಸಿದ್ದಾರೆʼ ಎಂದು ಉಲ್ಲೇಖಿಸಲಾಗಿದೆ. ಇದರ ಕುರಿತು ವಿಚಾರಿಸಿದಾಗ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರು ಕೆಲವು ದೋಷಿಗಳು ಮೇಲ್ಮನವಿ ಸಲ್ಲಿಸಿದರೆ ಶಿಕ್ಷೆಯ ಕ್ಷಮಾದಾನ ಸಿಗುವುದಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಮೇಲ್ಮನವಿ ಸಲ್ಲಿಸಿದರೆ ಅಂಥವರು ಕ್ಷಮಾದಾನಕ್ಕೆ ಅರ್ಹರಾಗುವುದಿಲ್ಲ ಎಂದು ಹೇಳಿರುವ ಯಾವುದೇ ಕಾನೂನು ಇಲ್ಲ. ಈ ಕುರಿತು ತಪ್ಪು ಭಾವನೆ ಮತ್ತು ಆತಂಕ ಹೊಂದಿರುವ ಎಲ್ಲಾ ದೋಷಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿವಳಿಕೆ ಮೂಡಿಸಬೇಕು.
• ಈ ಕುರಿತು ಕಾರಾಗೃಹದ ಮಹಾನಿರ್ದೇಶಕರು, ಸಂಬಂಧಿತ ಎಲ್ಲಾ ಡಿಎಲ್‌ಎಸ್‌ಎ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದರೆ ಕ್ಷಮಾದಾನ ದೊರೆಯುವುದಿಲ್ಲ ಎಂಬ ಗೊಂದಲದ ಬಗ್ಗೆ ಕಾನೂನಿನ ಅರಿವನ್ನು ದೋಷಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿಸಬೇಕು. ಅದಾಗ್ಯೂ, ದೋಷಿಗಳು ಮತ್ತು ಅವರ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಲು ಬಯಸದಿದ್ದರೆ ಅದನ್ನು ಅಫಿಡವಿಟ್‌ ರೂಪದಲ್ಲಿ ಸಲ್ಲಿಸಬೇಕು.
• ʼಈಚೆಗೆ ದೋಷಿʼ ಎಂದು ಘೋಷಿಸಲಾಗಿದೆ ಎಂದು ಕೆಲವು ಕಡೆ ಉಲ್ಲೇಖಿಸಲಾಗಿದೆ. ಇಂಥ ಸಂದರ್ಭದಲ್ಲಿ ದೋಷಿಗಳಿಗೆ ಉಚಿತ ಕಾನೂನು ನೆರವು ಸಿಗುವುದರ ಕುರಿತು ಜೈಲು ಅಧಿಕಾರಿಗಳು ಮಾಹಿತಿ ನೀಡಬೇಕು.
• ದೋಷಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದು ಕಡೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸಾಫ್ಟ್‌ವೇರ್‌ ರೂಪಿಸುವ ಕುರಿತಾದ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡಲಾಗಿದ್ದು, ಅದನ್ನು ಕಂಪ್ಯೂಟರ್‌ ಮತ್ತು ತಂತ್ರಜ್ಞಾನ ಸಮಿತಿಯ ಮುಂದೆ ಪರಿಗಣನೆಗೆ ಇಡುವಂತೆ ಸಿಜೆ ನಿರ್ದೇಶಿಸಿದ್ದಾರೆ. ಸಮಿತಿಯ ಮುಂದೆ ವಿಚಾರ ಇಡಲು ಸಿಜೆ ನಿರ್ದೇಶಿಸಿರುವುದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಕಂಪ್ಯೂಟರ್‌ ಮತ್ತು ತಂತ್ರಜ್ಞಾನ ಸಮಿತಿ ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಸೂಕ್ತ ತಂತ್ರಾಂಶವನ್ನು ತಕ್ಷಣ ಅಭಿವೃದ್ಧಿಪಡಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಕುರಿತು ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಅವರು ಮುಂದಿನ ವರದಿ ಸಲ್ಲಿಸಬೇಕು.
• ಜೈಲು ಪ್ರಾಧಿಕಾರಗಳು, ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಮತ್ತು ನ್ಯಾಯಾಂಗದ ಹೆಚ್ಚುವರಿ ರಿಜಿಸ್ಟ್ರಾರ್‌ ಅವರು ಮುಂದಿನ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿರುವ ಪೀಠವು ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಿದೆ.

- Advertisement -

(ಕೃಪೆ: ಬಾರ್ & ಬೆಂಚ್)



Join Whatsapp