ಶಿಕ್ಷಕರ ನೇಮಕಾತಿ ಪ್ರಕಟ: ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೂ ಅವಕಾಶ

Prasthutha|

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇದ್ದ ಪದವೀಧರ ಶಿಕ್ಷಕರ ಹುದ್ದೆಗಳ (6ರಿಂದ 8ನೇ ತರಗತಿ) ನೇಮಕಾತಿ ಸಂಬಂಧ ಶಿಕ್ಷಣ ಇಲಾಖೆಯು ತಾತ್ಕಾಲಿಕ ಪಟ್ಟಿಯನ್ನು ಮಾಡಿದ್ದು, 13,363 ಅಭ್ಯರ್ಥಿಗಳು ಸ್ಥಾನಪಡೆದಿದ್ದಾರೆ.

- Advertisement -

15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಒಟ್ಟು 13,363 ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1,637 ಹುದ್ದೆಗಳು ನೇಮಕವಾಗದೇ ಖಾಲಿ ಉಳಿದಿವೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್, ಈ ವರ್ಷದ ಮಾರ್ಚ್’ನಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 68,849 ಅಭ್ಯರ್ಥಿಗಳು ಸಿಇಟಿ ಬರೆದಿದ್ದರು. ಅವರಲ್ಲಿ 51,098 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. 22,432 ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಆಯ್ಕೆ ಮಾಡಲಾಗಿತ್ತು. ಈಗ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ನ.23ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲೆಗಳ ಉಪನಿರ್ದೇಶಕರ ಕಚೇರಿಯಲ್ಲಿ ನ.19ರಿಂದ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆ ಪೂರ್ಣಗೊಂಡ ಒಂದು ತಿಂಗಳಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

- Advertisement -

ಇನ್ನು ವಿಷಯವಾರು ಇಂಗ್ಲೀಷ್‌ ಭಾಷೆಯಲ್ಲಿ ಖಾಲಿ ಇದ್ದ 1807 ಹುದ್ದೆಗಳಿಗೆ 1768 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಖಾಲಿ ಇದ್ದ 6500 ಹುದ್ದೆಗಳಿಗೆ 5550 ಅಭ್ಯರ್ಥಿಗಳು, ಸಮಾಜ ಪಾಠಗಳ 4693 ಹುದ್ದೆಗಳಿಗೆ 4521 ಅಭ್ಯರ್ಥಿಗಳು, ಜೀವ ವಿಜ್ಞಾನದ 2000 ಹುದ್ದೆಗಳಿಗೆ 1624 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಪರೀಕ್ಷೆ ಬರೆದಿದ್ದ 10 ತೃತೀಯ ಲಿಂಗಿಗಳಲ್ಲಿ ಮೂವರು ಆಯ್ಕೆಯಾಗಿದ್ದಾರೆ. ಆಂಗ್ಲ ಭಾಷೆಯಲ್ಲಿ ಒಬ್ಬರು, ಸಮಾಜ ವಿಜ್ಞಾನದಲ್ಲಿ ಇಬ್ಬರು ಸ್ಥಾನ ಪಡೆದಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದ 34 ಅಭ್ಯರ್ಥಿಗಳು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದರು. ಅವರಲ್ಲಿ 19 ಮಂದಿ ಆಯ್ಕೆಯಾಗಿದ್ದಾರೆ. ಖಾಲಿ ಉಳಿದ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್, ಆಯುಕ್ತ ಆರ್. ವಿಶಾಲ್, ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ, ಜಂಟಿ ನಿರ್ದೇಶಕಿ ಪ್ರೇಮಾ ಉಪಸ್ಥಿತರಿದ್ದರು.



Join Whatsapp