ಬೆಂಗಳೂರು: ಚುನಾವಣೆಯ ಹೊಸ್ತಿನಲ್ಲಿರುವ ಕರ್ನಾಟಕದಲ್ಲಿ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆದಿದೆ ಎನ್ನಲಾದ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ ಹಗರಣದಿಂದ ಮುಜುಗರಕ್ಕೀಡಾಗಿರುವ ಚುನಾವಣಾ ಆಯೋಗ ಕೊನೆಗೂ ಎಚ್ಚೆತ್ತುಕೊಂಡಿದ್ದು, ಹಿರಿಯ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಇಡೀ ಪ್ರಕರಣದ ತನಿಖೆಗೆ ಮುಂದಾಗಿದೆ.
ಶುಕ್ರವಾರ ಈ ಸಂಬಂಧ ಆಯೋಗ ತನಿಖೆಗೆ ಆದೇಶಿಸಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಅವರು ಮಾಹಿತಿ ನೀಡಿ, ಎನ್’ಜಿಒ, ಕೆಪಿಸಿಸಿ ಮತ್ತು ಮಾಧ್ಯಮ ವರದಿಗಳು ಸಲ್ಲಿಸಿದ ದೂರುಗಳ ಬಗ್ಗೆ ವಾಸ್ತವಿಕ ವರದಿಯನ್ನು ನೀಡುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ (ಆರ್’ಸಿ) ಆಮ್ಲನ್ ಆದಿತ್ಯ ಬಿಸ್ವಾಸ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಅತ್ಯಂತ ಗಂಭೀರವಾದುದಾಗಿದ್ದು, ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಆದ್ದರಿಂದ, ಈ ಬಗ್ಗೆ ವಿವರವಾದ ತನಿಖೆ ನಡೆಸಿ ಶೀಘ್ರವಾಗಿ ಸಮಗ್ರ ವರದಿಯನ್ನು ಕಳುಹಿಸಲು ನಿಮಗೆ ಸೂಚಿಸಲಾಗಿದೆ ಎಂದು ಸಿಇಒ ಮೀನಾ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಸಮನ್ವಯ ಟ್ರಸ್ಟ್’ನ ದೂರು, ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಯಿಂದ ಬಂದ ಪತ್ರಗಳು, ವಾಟ್ಸಾಪ್ ಮೂಲಕ ಬಂದ ದೂರು ಮತ್ತು ಕೆಪಿಸಿಸಿ ದೂರುಗಳನ್ನು ಉಲ್ಲೇಖಿಸಲಾಗಿದೆ.
ಈ ಮಧ್ಯೆ ಶನಿವಾರ ಕೆಪಿಸಿಸಿ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಗೆ ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ವಕ್ತಾರ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದೆ.