ಬೆಂಗಳೂರು: ಹೆಸರು ಬದಲಿಸಿಕೊಂಡು ಭಾರತದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡು ಅಕ್ರಮವಾಗಿ ನಕಲಿ ಪಾಸ್’ಪೋರ್ಟ್ ಸಿದ್ಧಪಡಿಸಿಕೊಂಡಿದ್ದ ನೇಪಾಳದ ಪ್ರಜೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ನೇಪಾಳದ ಪ್ರಜೆ ನರೇಶ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕಳೆದ ನ.12ರಂದು ಅಕ್ರಮವಾಗಿ ಪಡೆದ ಪಾಸ್’ಪೋರ್ಟ್ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಿಂದ ಕಠ್ಮಂಡುಗೆ ಪ್ರಯಾಣ ಬೆಳೆಸಲು ಅಣಿಯಾಗಿದ್ದ. ಡಿಪಾರ್ಚರ್ ಇಮಿಗ್ರೇಷನ್ ಏರ್’ಕೌಂಟರ್ ಏರ್’ಪೋರ್ಟ್ ಸಿಬ್ಬಂದಿ ಈತನ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯ ನಿಜವಾದ ಹೆಸರು ಅಶ್ವಿನ್ ದಮೈ. 2005 ರಲ್ಲಿ ಭಾರತಕ್ಕೆ ಬಂದಿದ್ದ ಈತ ತಮಿಳುನಾಡಿನಲ್ಲಿ ವಾಸವಿದ್ದು ನರೇಶ್ ಕುಮಾರ್ ಹೆಸರಿನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದಾನೆ. ನಂತರ ಇದೇ ಹಾದಿಯಲ್ಲಿ ಸಾಗಿ ಪಾಸ್ಪೋರ್ಟ್ ಕೂಡಾ ಸಿದ್ಧಪಡಿಸಿಕೊಂಡಿದ್ದಾನೆ.
ಆರೋಪಿಯ ವಿರುದ್ಧ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಫಾರಿನರ್ ಆ್ಯಕ್ಟ್ 1946, ಪಾಸ್ಪೋರ್ಟ್ ಆ್ಯಕ್ಟ್ 1967ರ ಅಡಿ ಪ್ರಕರಣ ದಾಖಲಾಗಿದೆ.