ಇಂದಿನಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಆರಂಭ

Prasthutha|

- Advertisement -

ಬೆಂಗಳೂರು: ಜೆಡಿಎಸ್ ಪಂಚರತ್ನ ರಥಯಾತ್ರೆ ಇಂದಿನಿಂದ ಆರಂಭಗೊಳ್ಳಲಿದ್ದು, ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆಯಿಂದ ಹೊರಡಲಿದೆ.

ಈ ಕುರಿತು ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದ ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮೇಲೆ ಶ್ರೀ ಗಣಪತಿ ದೇವಾಲಯದಿಂದ ನ. 1ರಂದೇ ರಥಯಾತ್ರೆ ಆರಂಭವಾಗಿತ್ತು. ಆದರೆ, ಮಳೆಯ ಕಾರಣಕ್ಕೆ ಮುಂದೂಡಲಾಗಿತ್ತು ಎಂದು ಹೇಳಿದ್ದಾರೆ.

- Advertisement -

ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮೈಸೂರಿಗೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿಗಳು, ಶುಕ್ರವಾರ ಬೆಳಗ್ಗೆಯೇ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಅವರು ಮುಳಬಾಗಿಲಿಗೆ ಆಗಮಿಸಿ ಪಂಚರತ್ನ ಯಾತ್ರೆಗೆ ಚಾಲನೆ ಕೊಡುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ಮಾಜಿ ಪ್ರಧಾನಮಂತ್ರಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಅವರು ಮುಳಬಾಗಿಲಿನಲ್ಲಿ ಎಲ್ಲಾ ರಥಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಿದ್ದಾರೆ.

 ಮಧ್ಯಾಹ್ನ 2 ಗಂಟೆಗೆ ಮುಳಬಾಗಿಲು ಪಟ್ಟಣದ ತಿರುಪತಿ ಬೈಪಾಸ್ ರಸ್ತೆಯಲ್ಲಿರುವ ಬಾಲಾಜಿ ಭವನದ ಪಕ್ಕದ ಜಾಗದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮಾಜಿ ಸಚಿವರು, ಎಲ್ಲ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಪಕ್ಷವು, ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದೆ. ಇದಕ್ಕಾಗಿ ಪಂಚರತ್ನ ಯಾತ್ರೆ ಹೆಸರಿನಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

‘ ಪಂಚರತ್ನ ರಥಯಾತ್ರೆ; ನವ ಕರ್ನಾಟಕ ನಿರ್ಮಾಣಕ್ಕಾಗಿ ಮಹಾಯಾತ್ರೆ ‘ ಹೆಸರಿನಲ್ಲಿ ಈ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ ಎಂದು ಬಿಂಬಿಸಲಾಗುತ್ತಿದೆ. ಶಿಕ್ಷಣವೆ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು. ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ. ಚುನಾವಣೆ ಪ್ರಣಾಳಿಕೆಯಲ್ಲಿ ಕೂಡ ಈ ಐದು ಅಂಶಗಳೇ ಪ್ರಮುಖ ಯೋಜನೆಗಳಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

ಗ್ರಾಮ ವಾಸ್ತವ್ಯ:

ಗ್ರಾಮ ವಾಸ್ತವ್ಯದ ನಿಮಿತ್ತ ಕುಮಾರಸ್ವಾಮಿ ಅವರು  ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಥವಾ ದೇಗುಲದಲ್ಲಿ ಉಳಿದುಕೊಳ್ಳಲಿದ್ದಾರೆ. ಈ ವೇಳೆ ಅವರು ಗ್ರಾಮದ ಜನರ ಜತೆ ಸಂವಾದ, ವಿಚಾರ ವಿನಿಮಯ ನಡೆಸುವರು. ಮುಖ್ಯವಾಗಿ ಮಹಿಳೆಯರು, ಯುವಕರು, ರೈತರು, ವೃದ್ಧರ ಜತೆ ಚರ್ಚೆ ನಡೆಸುವರು. ಹಳ್ಳಿಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ, ಸ್ವತಃ ತಾವೇ ಗ್ರಾಮ ಸಂಚಾರ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ಕೂಡ ಜತೆಯಲ್ಲಿ ಇರುತ್ತಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಆರಂಭವಾಗುವ ರಥಯಾತ್ರೆಯು, ದಿನಕ್ಕೊಂದು ಕ್ಷೇತ್ರದಂತೆ ಕ್ರಮವಾಗಿ ಬಂಗಾರಪೇಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ; ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರದ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರವೇಶ ಮಾಡಲಿದೆ.

ಅಕ್ಟೋಬರ್ 27ರಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥಕ್ಕೆ ಸಾಂಕೇತಿಕವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದರು.



Join Whatsapp