ಬೆಂಗಳೂರು: ರಾಜ್ಯ ಹಾಗೂ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಗ್ಧ ಅಲ್ಪಸಂಖ್ಯಾತ ಮತದಾರರನ್ನು ಮತದಾನ ಚಲಾಯಿಸುವ ಹಕ್ಕಿನಿಂದ ವಂಚಿಸುವ ಕಾರ್ಯ ನಡೆಯುತ್ತಿದೆ. ಈ ಕಾರ್ಯ ನಡೆಸಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳ ಬೇಕೆಂದು ವಿಧಾನ ಸಭೆ ಉಪನಾಯಕ ಯು.ಟಿ.ಖಾದರ್ ಒತ್ತಾಯಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಪೊಲೀಸ್ ಬ್ಯಾಡ್ಜ್’ಗಳನ್ನು ಧರಿಸಿ ಅಧಿಕಾರಿಗಳು ಮನೆ, ಮನೆಗೆ ಹೋಗಿ ಅವರ ವಿವರ ಪಡೆದು ಪಟ್ಟಿಯಲ್ಲಿ ಇರುವವರ ಹೆಸರುಗಳನ್ನು ತೆಗೆದು ಹಾಕುವ ಕಾರ್ಯ ನಡೆಸುತ್ತಿದ್ದಾರೆ. ಕೆಲ ಅಲ್ಪ ಸಂಖ್ಯಾತ ಬಂಧುಗಳು ಕಾರ್ಯನಿಮಿತ್ತ ದುಬೈ ಇಲ್ಲವೇ ಬೇರೆ ಪ್ರದೇಶಗಳಿಗೆ ತೆರಳಿರುತ್ತಾರೆ. ಅಂತಹವರ ಹೆಸರುಗಳನ್ನು ತೆಗೆದು ಹಾಕುವ ಕಾರ್ಯ ನಡೆಸುತ್ತಿದ್ದಾರೆ. ಇದು ಸರಿಯಲ್ಲ ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಪ್ರತಿಪಕ್ಷ ನಾಯಕ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಆಡಳಿತ ಪಕ್ಷ ಸಂಪೂರ್ಣ ಜನರ ವಿಶ್ವಾಸ ಕಳೆದುಕೊಂಡಿದ್ದು, ಮತ್ತೆ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಇಂತಹ ಕೆಲಸಕ್ಕೆ ಕೈ ಹಾಕಿದೆ. ಕಾಂಗ್ರೆಸ್ ಪಕ್ಷ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯನ್ನು ಪ್ರತಿ ಮನೆಗೆ ಭೇಟಿ ಮಾಡಿ ಪರಿಶೀಲನೆ ನಡೆಸಲಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು, ತೆಗೆಯಲು ಆಧಾರ್ ಕಾರ್ಡ್ ಪ್ರೂಪ್ ತೆಗೆದುಕೊಳ್ಳುವುದು ಸರಿಯಲ್ಲ. ಒಂದು ಕಡೆ ಆಧಾರ್ ಕಾರ್ಡ್ ಇದ್ದು, ಇನ್ನೊಂದೆಡೆ ಮೂಲ ಸ್ಥಳದಲ್ಲಿ ಮತದಾರ ಚೀಟಿ ಇರುತ್ತದೆ. ಇದರಿಂದ ಬಹುತೇಕ ಮಂದಿ ಮತದಾನ ಚಲಾವಣೆಯಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಪ್ರತಿ ಕಾರ್ಯಕರ್ತನಿಗೆ ಸ್ಪರ್ಧಿಸುವ ಅವಕಾಶ ನೀಡಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಇದರಲ್ಲಿ ಯಾವುದೇ ಭಿನ್ನಮತ ಅಥವಾ ಗೊಂದಲ ಸೃಷ್ಟಿಸುವ ಉದ್ದೇಶ ಇಲ್ಲ. 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 170 ಸೀಟು ಗೆಲ್ಲುವ ವಾತಾವರಣವಿದ್ದು. ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.