ನವದೆಹಲಿ: ಇತ್ತೀಚೆಗೆ ವಂದೇ ಭಾರತ್ ರೈಲಿನಡಿಗೆ ಸಿಲುಕಿ ದನಕರುಗಳು ಸಾವಿಗೀಡಾಗುತ್ತಿರುವ ಪ್ರಕರಣಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ರೈಲು ಮಾರ್ಗದ ಪಕ್ಕದಲ್ಲಿ 1 ಸಾವಿರ ಕಿಲೋ ಮೀಟರ್ ವರೆಗೆ ಮುಂದಿನ ಆರು ತಿಂಗಳುಗಳಲ್ಲಿ ಆವರಣ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ವೈಷ್ಣವ್, ರೈಲು ಆವರಣ ತಡೆಗೋಡೆ ನಿರ್ಮಿಸುವ ವಿಷಯದಲ್ಲಿ ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಎರಡು ವಿಭಿನ್ನ ವಿನ್ಯಾಸಗಳನ್ನು ಪರಿಶೀಲಿಸಲಾಗುತ್ತಿದೆ. ಇದರಲ್ಲೊಂದು ವಿನ್ಯಾಸವನ್ನು ಅನುಮೋದಿಸಲಾಗಿದ್ದು, ಈ ವಿನ್ಯಾಸದ ಗೋಡೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಮುಂದಿನ ಐದರಿಂದ ಆರು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ 1,000 ಕಿಮೀ ಗೋಡೆ ನಿರ್ಮಿಸಲು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.
ರೈಲ್ವೆ ಸಚಿವಾಲಯ ಅಂಕಿಅಂಶ ಪ್ರಕಾರ, ಈ ವರ್ಷ ಜಾನುವಾರು ಅಥವಾ ಮನುಷ್ಯರು ಹಳಿಗಳ ಮೇಲೆ ಬಂದು ಅಪಘಾತವಾಗಿ ಇಲಾಖೆಗೆ ಉಂಟಾದ ನಷ್ಟಗಳು ಹೆಚ್ಚಾಗಿವೆ. 2022ರ ಹಣಕಾಸು ವರ್ಷದಲ್ಲಿ 2,115 ರೈಲು ನಷ್ಟ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ಎಪ್ರಿಲ್ ನಿಂದ ಅಕ್ಟೋಬರ್ ವರೆಗೆ 2,650 ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ವರ್ಷದಲ್ಲಿ ಸುಮಾರು 26 ಸಾವಿರ ಜಾನುವಾರುಗಳು ಅಡ್ಡ ಬಂದ ಪ್ರಕರಣಗಳು ವರದಿಯಾಗಿವೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.