ವಿಜಯಪುರ: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಜೀವ ದಹನವಾಗಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ತಾನುಕು ಮಂಡಲದ ಮುದ್ದಪುರಂ ಗ್ರಾಮದಲ್ಲಿ ನಡೆದಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ದ್ವಿತೀಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ನಾಗಹಾರಿಕಾ (19) ಮೃತಪಟ್ಟವರು. ಮೂರು ತಿಂಗಳ ಹಿಂದಷ್ಟೆ ಗೃಹಪ್ರವೇಶ ಮಾಡಿದ್ದ ಹೊಸ ಮನೆಯ ಬೆಡ್’ರೂಮ್’ನಲ್ಲೇ ಯುವತಿ ಸಜೀವ ದಹನವಾಗಿದ್ದಾಳೆ. ಇದು ಆಕಸ್ಮಿಕವೋ ಅಥವಾ ಕೊಲೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ತನಿಖೆ ಆರಂಭವಾಗಿದೆ.
ನಾಗಹಾರಿಕಾ ಮಲ್ಲಪುಡಿ ಶ್ರೀನಿವಾಸ್ ಮತ್ತು ರೂಪಾರಾಣಿ ದಂಪತಿಯ ಪುತ್ರಿ. ರೂಪಾರಾಣಿ ಇವರ ಮಲತಾಯಿ. ಆಕೆಗೆ ಮಂಜಲಿ ಪ್ರಿಯಾ ಎಂಬ 9 ವರ್ಷದ ಸ್ವಂತ ಹೆಣ್ಣು ಮಗಳಿದ್ದಾಳೆ. ಕಳೆದ ನ.14ರ ರಾತ್ರಿ ಹೊಸ ಮನೆಯ ಬೆಡ್’ರೂಮ್’ನಲ್ಲಿ ನಾಗಹಾರಿಕಾ ಮಲಗಿದ್ದಳು. ಬೆಳಗ್ಗೆ ನೋಡಿದಾಗ ಸಜೀವ ದಹನವಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ದೂರು ದಾಖಲಾಗಿದ್ದು, ಮಲತಾಯಿಯ ವಿಚಾರಣೆ ನಡೆದಿದೆ.
ಮನೆಯ ಸಂಪೂರ್ಣ ಪರಿಕರಗಳನ್ನು ಹೊಸ ಮನೆಗೆ ಸ್ಥಳಾಂತರಿಸದ ಕಾರಣ ನಾಗಹಾರಿಕಾ ತಂದೆ ಮುಳ್ಳಪುಡಿ ಶ್ರೀನಿವಾಸ್ ಹಳೆಮನೆಯಲ್ಲೇ ಮಲಗಿದ್ದರು. ಮರುದಿನ ಬೆಳಗ್ಗೆ ಹೊಸ ಮನೆಗೆ ಬಂದು ಪತ್ನಿಯನ್ನು ಎಬ್ಬಿಸಿದಾಗ ಮಗಳು ಮಲಗಿದ್ದ ಕೊಠಡಿಯಿಂದ ಹೊಗೆ ಬರುತ್ತಿರುವುದು ಗಮನಿಸಿದ್ದಾರೆ. ಹೋಗಿ ನೋಡುವಷ್ಟರಲ್ಲಿ ನಾಗಹಾರಿಕಾ ದೇಹ ಬೆಂಕಿಯಲ್ಲಿ ಸುಟ್ಟು ಹೋಗಿತ್ತು. ತಂದೆ ಮುಳ್ಳಪುಡಿ ಶ್ರೀನಿವಾಸ ರಾವ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಸಿಐ ಸಿ.ಎಚ್. ಆಂಜನೇಯುಲು, ಎಸ್’ಐ ರಾಜಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಫೊರೆನ್ಸಿಕ್ ಸಿಬ್ಬಂದಿ ಮತ್ತು ಶ್ವಾನದಳ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಪ್ರಕರಣದಲ್ಲಿ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ನಾಗಹಾರಿಕಾ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.