ನವದೆಹಲಿ: ನೂತನ ಸಿಇಒ ಎಲಾನ್ ಮಸ್ಕ್ ಅವರ ನಡೆಯನ್ನು ಟೀಕಿಸಿದ ಸಿಬ್ಬಂದಿಯನ್ನು ಟ್ವಿಟ್ಟರ್ ಸಂಸ್ಥೆ ಕರ್ತವ್ಯದಿಂದ ವಜಾಗೊಳಿಸಿದೆ.
ತಾನು ಮುಕ್ತವಾದ ವಾಕ್ ಸ್ವಾತಂತ್ರ್ಯದ ಪರ ಎಂದು ಹೇಳಿದ್ದ ಎಲಾನ್ ಮಸ್ಕ್ ಅವರು ತಮ್ಮ ವಿರುದ್ಧ ಟೀಕಿಸುವವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಎಲಾನ್ ಮಸ್ಕ್ ವಿರುದ್ಧ ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದ ಇಬ್ಬರು ಇಂಜಿನಿಯರ್’ಗಳನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.
ಟ್ವಿಟ್ಟರ್’ನ ಮೊಬೈಲ್ ಆಪರೇಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎರಿಕ್ ಫ್ರೋನ್’ಹೋಪರ್ ಎಂಬವರು ಎಲಾನ್ ಮಸ್ಕ್ ಅವರ ಹಳೇಯ ಟ್ವೀಟ್ ಅನ್ನು ಟ್ಯಾಗ್ ಮಾಡಿ, ಟ್ವಿಟ್ಟರ್’ನ ತಾಂತ್ರಿಕತೆಯ ಕುರಿತು ಮಸ್ಕ್ ಅವರು ತಪ್ಪು ಮಾಹಿತಿ ಹೊಂದಿದ್ದಾರೆ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, ಅಂಡ್ರಾಯ್ಡ್’ನಲ್ಲಿ ಟ್ವಿಟ್ಟರ್ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಸರಿ ಮಾಡಲು ನೀವು ಏನು ಮಾಡಿರುವಿರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಎರಿಕ್ ಫ್ರೋನ್’ಹೋಪರ್ ಸರಣಿ ಟ್ವೀಟ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಎರಿಕ್ ಫ್ರೋನ್’ಹೋಪರ್ ಅವರನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಫ್ರೋನ್’ಹೋಪರ್ ಅವರು ಕಳೆದ 8 ವರ್ಷಗಳಿಂದ ಟ್ವಿಟ್ಟರ್’ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.