ಬೆಂಗಳೂರು,ನ.13-ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಹಾಗೂ ಆತನ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಗೋಪಾಲನಗರದ ಶ್ರೀಗಂಧನಗರದಲ್ಲಿ ಘಟನೆ ನಡೆದಿದೆ.
ಶ್ರೀಗಂಧನಗರದ ಭಾಗ್ಯಮ್ಮ (57) ಹಾಗೂ ಶ್ರೀನಿವಾಸ್ (33) ಆತ್ಮಹತ್ಯೆ ಮಾಡಿಕೊಂಡವರು.
ಮೃತ ಶ್ರೀನಿವಾಸ್ ಪೋಷಕರಿಗೆ ವಯಸ್ಸಾಗಿತ್ತು. ಹಾಗಾಗಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಶ್ರೀನಿವಾಸ್ ಮಡಿಕೇರಿಯಲ್ಲಿದ್ದ ತನ್ನ ತಂದೆ, ತಾಯಿಯನ್ನು ನಗರದ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ಶ್ರೀನಿವಾಸ್ ಪತ್ನಿ ಸಂಧ್ಯಾಳಿಗೆ ಇದು ಇಷ್ಟವಿರಲಿಲ್ಲ.
ತನ್ನ ತಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ವಯಸ್ಸಾದ ಅತ್ತೆ – ಮಾವನನ್ನು ನೋಡಿಕೊಳ್ಳೋರು ಯಾರು? ತನಗೆ ಅತ್ತೆ, ಮಾವನನ್ನು ನೋಡಿಕೊಳ್ಳೋಕೆ ಕಷ್ಟವಾಗಲಿದೆ ಎಂದು ಸಂಧ್ಯಾ ಗಲಾಟೆ ತೆಗೆದಿದ್ದಳು.
ಇದೇ ವಿಚಾರವಾಗಿ ಮಧ್ಯರಾತ್ರಿ ಮೂರು ಗಂಟೆಗೆ ಗಲಾಟೆ ನಡೆದಿತ್ತು.
ಅದಾದ ಬಳಿಕ ಮೊದಲಿಗೆ ತಾಯಿ ಭಾಗ್ಯಮ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂತರ ಶ್ರೀನಿವಾಸ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಾಹ್ನದ ತನಕ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ನೋಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಗಲಾಟೆಯಿಂದ ಬೇಸತ್ತು ತಾಯಿ- ಮಗ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.