ಐಪಿಎಲ್‌ 2023 | ಪೊಲಾರ್ಡ್‌ರನ್ನು ಕೈಬಿಟ್ಟ ಮುಂಬೈ, ಮೊಯಿನ್‌ ಅಲಿ, ಜಡೇಜಾರನ್ನು ಉಳಿಸಿಕೊಂಡ ಚೆನ್ನೈ ಸೂಪರ್‌ ಕಿಂಗ್ಸ್‌

Prasthutha|

ಮುಂಬೈ; ಐಪಿಎಲ್‌ನ 2023ರ ಆವೃತ್ತಿಗೂ ಮುಂಚಿತವಾಗಿ ಡಿಸೆಂಬರ್‌ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ. ಈ ಹಿನ್ನಲೆಯಲ್ಲಿ ಐಪಿಎಲ್‌ನ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್‌  ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು, ತಮ್ಮಲ್ಲೇ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದೆ.

- Advertisement -

ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ಅಚ್ಚರಿ ಎಂಬಂತೆ  ತಂಡದ ಪ್ರಮುಖ ಆಲ್‌ರೌಂಡರ್‌ ವೆಸ್ಟ್‌ ಇಂಡೀಸ್‌ನ ದೈತ್ಯ ಆಟಗಾರ ಕೈರಾನ್‌ ಪೊಲಾರ್ಡ್‌ರನ್ನು ತಂಡದಿಂದ ಬಿಡುಗಡೆಗೊಳಿಸಿದೆ. 2010ರಿಂದಲೂ ಪೊಲಾರ್ಡ್‌, ಐಪಿಎಲ್‌ನಲ್ಲಿ ಮುಂಬೈ ತಂಡದ ಪ್ರಧಾನ ಆಟಗಾರರಾಗಿದ್ದಾರೆ. ಮೂಲಗಳ ಪ್ರಕಾರ ಪೊಲಾರ್ಡ್‌ ಜೊತೆಗೆ ಫ್ಯಾಬ್ ಅಲೆನ್ ಮತ್ತು ಟೈಮಲ್ ಮಿಲ್ಲಿಸ್ ಅವರನ್ನು  ಸಹ ಬಿಡುಗಡೆ ಮಾಡಲು ಮುಂಬೈ ನಿರ್ಧರಿಸಿದ್ದು, ಈ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲಾಗಿದೆ.

ಮತ್ತೊಂದೆಡೆ ಊಹಾಪೋಹಗಳಿಗೆ ತೆರೆ ಎಳೆದಿರುವ ಚೆನ್ನೈ ಸೂಪರ್ ಕಿಂಗ್ಸ್, ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾರನ್ನು ತನ್ನಲ್ಲೇ ಉಳಿಸಿಕೊಂಡಿದೆ.  ಆದರೆ ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ ಹಾಗೂ ಮಿಚೆಲ್ ಸ್ಯಾಂಟ್ನರ್‌ರನ್ನು ತಂಡದಿಂದ ಬಿಡುಗಡೆ ಮಾಡಿದೆ.

- Advertisement -

ಐಪಿಎಲ್‌ನ 16ನೇ ಆವೃತ್ತಿಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಬಿಸಿಸಿಐ, ಡಿಸೆಂಬರ್‌ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಸುವುದಾಗಿ ಇತ್ತೀಚಿಗೆ ಘೋಷಿಸಿತ್ತು. ಇದಕ್ಕಾಗಿ ನವೆಂಬರ್‌ 15ರ ಒಳಗಾಗಿ ಐಪಿಎಲ್‌ನ ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು. ಮಿನಿ ಹರಾಜಿನಲ್ಲಿ ಆಟಗಾರರ ಸಂಬಳಕ್ಕಾಗಿ ಖರ್ಚು ಮಾಡಲು ಫ್ರಾಂಚೈಸಿಗಳಿಗೆ ನಿಗದಿಪಡಿಸಲಾಗಿರುವ ಮೊತ್ತವನ್ನು 90ರಿಂದ ಕೋಟಿಗೆ ಏರಿಸುವ ಸಾಧ್ಯತೆಯೂ ಇದೆ. ಕಳೆದ ವರ್ಷ ನಡೆದ ಮೆಗಾ ಹರಾಜಿನ ಬಳಿಕ ತಂಡಗಳ ಬಳಿ ಉಳಿದಿರುವ ಮತ್ತು ಆಟಗಾರರನ್ನು ಬಿಡುಗಡೆಗೊಳಿಸಿದ ಬಳಿಕ ಲಭ್ಯವಿರುವ ಮೊತ್ತವನ್ನು ಫ್ರಾಂಚೈಸಿಗಳು ಮಿನಿ ಹರಾಜಿನಲ್ಲಿ ವ್ಯಯಿಸಬಹುದಾಗಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್‌ (5 ಬಾರಿ) ಎಂಬ ಖ್ಯಾತಿಯ ಮುಂಬೈ ಇಂಡಿಯನ್ಸ್‌ ಕಳೆದ ಬಾರಿಯ ಟೂರ್ನಿಯಲ್ಲಿ ನೆಲಕಚ್ಚಿತ್ತು. 15ನೇ ಆವೃತ್ತಿಯ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿತ್ತು. ಈ ಹಿನ್ನಲೆಯಲ್ಲಿ ತಂಡವನ್ನು ಮತ್ತೆ ಪುನರ್‌ರಚನೆಗೊಳಿಸಲು ಫ್ರಾಂಚೈಸಿ ನಿರ್ಧರಿಸಿದೆ. ಪ್ರಮುಖ ಮಾಧ್ಯಮಗಳ ವರದಿಯ ಪ್ರಕಾರ, ಒಟ್ಟು 10 ಆಟಗಾರರನ್ನು ಮುಂಬೈ ಉಳಿಸಿಕೊಂಡಿದ್ದು, 5 ಆಟಗಾರರನ್ನು ಬಿಡುಗಡೆ ಮಾಡಿದೆ.

ರೋಹಿತ್ ಶರ್ಮಾ, ಡೆವಾಲ್ಡ್ ಬ್ರೂಯಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡ್ಯಾನಿಯಲ್ ಸ್ಯಾಮ್‌, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ತಿಲಕ್ ವರ್ಮಾರನ್ನು ಉಳಿಸಿಕೊಳ್ಳಲಾಗಿದೆ. ಫ್ಯಾಬಿಯನ್ ಅಲೆನ್, ಕೈರಾನ್ ಪೊಲಾರ್ಡ್, ಟೈಮಲ್ ಮಿಲ್ಸ್, ಮಯಾಂಕ್ ಮಾರ್ಕಾಂಡೆ ಹಾಗೂ ಹೃತಿಕ್ ಶೌಕಿನ್‌ರನ್ನು ಬಿಡುಗಡೆ ಮಾಡಲಾಗಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 9 ಆಟಗಾರರನ್ನು ಉಳಿಸಿಕೊಂಡಿದ್ದು, 4 ಆಟಗಾರರನ್ನು ಬಿಡುಗಡೆ ಮಾಡಿದೆ. ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮುಖೇಶ್ ಚೌಧರಿ, ಡ್ವೇನ್ ಪ್ರಿಟೋರಿಯಸ್ ಹಾಗೂ ದೀಪಕ್ ಚಹಾರ್‌ರನ್ನು ಮುಂದಿನ ಆವೃತ್ತಿಗೆ ಉಳಿಸಿಕೊಂಡಿದೆ. ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ನಾರಾಯಣ್ ಜಗದೀಶನ್ ಮತ್ತು ಮಿಚೆಲ್ ಸ್ಯಾಂಟ್ನರ್‌ರನ್ನು ಬಿಡುಗಡೆ ಮಾಡಿದೆ.



Join Whatsapp