ಪೀಣ್ಯಾ ಕೈಗಾರಿಕಾ ಸಂಘದಿಂದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

Prasthutha|

ಬೆಂಗಳೂರು: ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ನಿಂದ ಪಿಐಎ ಭವನದಲ್ಲಿ ಬೃಹತ್ ಉದ್ಯೋಗ ಮೇಳ – ಜಾಬ್ ಫೆಸ್ಟ್ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಮೇಳದಲ್ಲಿ ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳಿಂದ ವ್ಯಾಪಕ ಸಂತಸ ವ್ಯಕ್ತವಾಯಿತು.

- Advertisement -

ರೋಟರಿ ಬೆಂಗಳೂರು ಉದ್ಯೋಗ್ ಮತ್ತು ಬೆಂಗಳೂರಿನ ಮೆಸಸ್ ಡೆವಲಪ್ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಮೇಳವನ್ನು ಶಾಸಕ ಆರ್. ಮಂಜುನಾಥ್ ಉದ್ಘಾಟಿಸಿದರು.
ಕೆ.ಎಸ್.ಎಸ್.ಐ.ಡಿ.ಸಿಯ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಗೌಡ, ಉಪ ಕಾರ್ಮಿಕ ಆಯುಕ್ತರಾದ ಎ.ಎಸ್. ಉಮೇಶ್, ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷ ಮಂಜುನಾಥ ಎಚ್ ಮತ್ತಿತರರು ಪಾಲ್ಗೊಂಡರು.

ಶಾಸಕ ಆರ್. ಮಂಜುನಾಥ್ ಮಾತನಾಡಿ, ಪೀಣ್ಯಾ ಕೈಗಾರಿಕಾ ಸಂಘ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿದೆ. ಸುಮಾರು ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅರ್ಹ ಮತ್ತು ಕೌಶಲ್ಯ ಹೊಂದಿರುವವರಿಗೆ ಉದ್ಯೋಗ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ಅಶ್ವಿನ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆರಂಭಿಸಿರುವ ಸ್ಕಿಲ್ ಕನೆಕ್ಟ್ ಪೋರ್ಟಲ್ ನ ಬಗ್ಗೆ ಉದ್ಯೋಗಾಕಾಂಕ್ಷಿಗಳಿಗೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಈ ಪೋರ್ಟಲ್ ನಡಿ 25000 ಕ್ಕೊ ಹೆಚ್ಚು ಉದ್ಯೋಗಾವಕಾಶಗಳು ನೋಂದಣಿಗೊಂಡಿದ್ದು, ಈ ಸಂದರ್ಭದಲ್ಲಿ ಎಲ್ಲರೂ ಸಹ www.skillconnect.kaushalkar.com ನಡಿ ನೋಂದಣಿಗೊಂಡು ಉದ್ಯೋಗಾವಕಾಶ ಪಡೆದುಕೊಳ್ಳುವಂತೆ ಉದ್ಯೋಗಾಕಾಂಕ್ಷಿಗಳಿಗೆ ಮನವಿ ಮಾಡಿದರು.

ಮೇಳದಲ್ಲಿ ಯುಕೆನ್ ಇಂಡಿಯಾ. ಲಿ, ಎಸ್ಎಲ್ಎನ್ ಇಂಡಸ್ಟ್ರೀಸ್, ಎಂ.ಎಸ್. ವಿನುಮಕ್, ವರ್ನರ್ ಫಿನ್ಲೆ ಪ್ರೈ. ಲಿ, ಟಿಐಎ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ, ಹೈಟೆಕ್ ಯೋಜನೆಗಳು, ಫೋರೆಸ್ ಇಂಜಿನಿಯರಿಂಗ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಶೇ 50 ರಷ್ಟು ಮಧ್ಯಮ ಗಾತ್ರದ ಕಂಪನಿಗಳು ಮತ್ತು ಉಳಿದಂತೆ ಸಣ್ಣ ಮತ್ತು ಸೂಕ್ಷ್ಮ ಕಂಪನಿಗಳು ಮೇಳದಲ್ಲಿ ಉದ್ಯೋಗ ಒದಗಿಸಿತು.



Join Whatsapp