ಔರಂಗಾಬಾದ್: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಸಾಗುತ್ತಿದ್ದು, ಯಾತ್ರೆ ಮುಗಿದು ಮರಳುವಾಗ ಟ್ರಕ್ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತಪಟ್ಟಾತನನ್ನು ತಮಿಳುನಾಡು ಮೂಲದ ಗಣೇಶ್ ಪೊನ್ರಾಮನ್ ಎಂದು ಗುರುತಿಸಲಾಗಿದೆ. ಟ್ರಕ್ ಡಿಕ್ಕಿ ಪರಿಣಾಮ ಇನ್ನೋರ್ವ ವ್ಯಕ್ತಿ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಣೇಶ್, ನಾಂದೇಡ್ ನಲ್ಲಿ ಜರುಗಿದ ಜೋಡೋ ಯಾತ್ರೆಗೆ ಭಾಗವಹಿಸಿದ ಬಳಿಕ ಶಿಬಿರದ ನಿಮಿತ್ತ ಪಿಪಲ್ ಗಾಂವ್ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ರಾತ್ರಿ 8:20ರ ಹೊತ್ತಿನಲ್ಲಿ ಟ್ರಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಪರಿಣಾಮ ಗಣೇಶ್ ಮೃತಪಟ್ಟಿದ್ದಾರೆ.
ಯಾತ್ರೆಯ ಪ್ರೀತಿಯ ಒಡನಾಡಿಯನ್ನು ಕಳೆದುಕೊಂಡಿದ್ದೇನೆ ಎಂದು ರಾಹುಲ್ ವಿಷಾದ ವ್ಯಕ್ತಪಡಿಸಿದ್ದಾರೆ.