ಕಾಸ್ ಗಂಜ್: ಕಿಡ್ನಿ ಸ್ಟೋನ್ ಶಸ್ತ್ರ ಚಿಕಿತ್ಸೆ ಮಾಡಲು ಹೋಗಿದ್ದ ಗೃಹ ರಕ್ಷಕ ಸಿಬ್ಬಂದಿಯೊಬ್ಬರ ಕಿಡ್ನಿಯನ್ನೇ ವೈದ್ಯರು ಕಳವು ಮಾಡಿದ ಘಟನೆ ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ನಡೆದಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಗೃಹರಕ್ಷಕರಾಗಿ ಕೆಲಸ ಮಾಡುತ್ತಿರುವ ಸುರೇಶ್ ಚಂದ್ರ ಕಿಡ್ನಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2022ರ ಏಪ್ರಿಲ್ 12ರಂದು ಪರೀಕ್ಷಿಸಿದ ನಂತರ ನನ್ನ ಎಡಭಾಗದ ಮೂತ್ರಪಿಂಡದಲ್ಲಿ ಕಲ್ಲು ಇರುವ ಬಗ್ಗೆ ತಿಳಿಯಿತು. 2022ರ ಏಪ್ರಿಲ್ 14ರಂದು ಅಲಿಗಢದ ಪ್ಯಾರಿ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್ ತೆಗೆಯುವ ಶಸ್ತ್ರಚಿಕಿತ್ಸೆ ನಡೆಯಿತು. ಸುಮಾರು ಎಂಟು ತಿಂಗಳ ಬಳಿಕ ನನ್ನ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. ನಂತರ ನಾನು ಮತ್ತದೇ ಆಸ್ಪತ್ರೆಗೆ ತೆರಳಿ ಅಲ್ಟ್ರಾಸೌಂಡ್ ಮಾಡಿಸಿದ್ದೆ. ಪರೀಕ್ಷೆಗೆ ಒಳಗಾದ ನಂತರ ಎಡ ಮೂತ್ರಪಿಂಡ ಕಾಣೆಯಾಗಿರುವುದು ತಿಳಿಯಿತು ಎಂದು ಅವರು ಹೇಳಿದ್ದಾರೆ.