58 ವರ್ಷಕ್ಕೆ ನೌಕರನ ನಿವೃತ್ತಿ: ಕೆಎಸ್’ಸಿಎ ಗೆ ಹೈಕೋರ್ಟ್ ನೋಟಿಸ್

Prasthutha|

ಬೆಂಗಳೂರು: ರಾಜ್ಯದಲ್ಲಿ ನಿವೃತ್ತಿ ವಯಸ್ಸು 60 ಇದ್ದರೂ 58 ವರ್ಷಕ್ಕೆ ನೌಕರರೊಬ್ಬರನ್ನು ನಿವೃತ್ತಿಗೊಳಿಸಿರುವ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ ಸಿಎ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

- Advertisement -

ಅವಧಿಗೆ ಮುನ್ನ ನಿವೃತ್ತಿಗೊಳಿಸಿರುವ ಕ್ರಮ ಪ್ರಶ್ನಿಸಿ ಕೆಎಸ್ ಸಿಎಯ 58 ವರ್ಷದ ನೌಕರ ಜೆ.ರಾಜಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ಪೀಠವು ಪ್ರತಿವಾದಿಗಳಾದ ಕಾರ್ಮಿಕ ಇಲಾಖೆ ಹಾಗೂ ಕೆಎಸ್ ಸಿಎಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರಿಗೆ 58 ವರ್ಷ ತುಂಬಿರುವುದಾಗಿ ತಿಳಿಸಿ ಕೆಎಸ್ ಸಿಎ ಕಳೆದ 2022ರ ಮಾರ್ಚ್ 13 ರಂದು ಪತ್ರ ಬರೆದು ನಿವೃತ್ತರಾಗುವಂತೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜಿದಾರ, ನನ್ನ ನಿವೃತ್ತಿಯ ಆದೇಶ ಪತ್ರ ಮರುಪರಿಶೀಲನೆ ಮಾಡಬೇಕು ಎಂದು ಕೋರಿ 2022ರ ಜುಲೈ 11ರಂದು ಕೆಎಸ್ ಸಿಎಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ, ಕೆಎಸ್ಸಿಎ ಈ ಮನವಿಯನ್ನು ತಿರಸ್ಕರಿಸಿತ್ತು.

- Advertisement -

ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದು, ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸನ್ನು 58 ರಿಂದ 60 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಕರ್ನಾಟಕ ಕೈಗಾರಿಕಾ ಸ್ಥಾಪನೆ ನಿಯಮಗಳು 1961ರ ವೇಳಾಪಟ್ಟಿ 1 ಅನ್ನು ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ 2017ರ ಮಾರ್ಚ್ 27ರಂದು ಅಧಿಸೂಚನೆ ಹೊರಡಿಸಿದೆ.

ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿವೃತ್ತಿಯ ವಯಸ್ಸು 60 ವರ್ಷಗಳಾಗಿರಬೇಕು. ಆದರೆ, ಕೆಎಸ್ಸಿಎ 58 ವರ್ಷಕ್ಕೆ ನಿವೃತ್ತರಾಗುವಂತೆ ಸೂಚಿಸಿದೆ. ಹೀಗಾಗಿ ಕೆಎಸ್ಸಿಎ ಸೂಚನೆ ರದ್ದು ಪಡಿಸಬೇಕೆಂದು ಅವರು ಕೋರಿದ್ದರು.



Join Whatsapp