ಅಡಿಲೇಡ್: ಇಂದು ನಡೆದ ಟಿ20 ವಿಶ್ವಕಪ್’ನ 2ನೇ ಸೆಮಿಫೈನಲ್ ಸೆಣಸಾಟದಲ್ಲಿ ಭಾರತ ತಂಡವನ್ನು ಮಣಿಸಿ ಇಂಗ್ಲೆಂಡ್ ಫೈನಲ್’ಗೆ ಲಗ್ಗೆ ಇಟ್ಟಿದೆ.
ಭಾರತ ನೀಡಿದ 169 ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ ವಿಜಯದ ಪತಾಕೆ ಹಾರಿಸಿ, ಫೈನಲ್ ಹಂತಕ್ಕೆ ತೇರ್ಗಡೆಯಾಗಿದೆ.
ಆರಂಭಿಕ ಆಟಗಾರರಾಗಿ ಆಗಮಿಸಿದ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಜೋಡಿ ಶತಕದ ಜೊತೆಯಾಟವಾಡಿ ಇಂಗ್ಲೆಂಡ್ ಗೆಲುವಿನ ಪ್ರಮುಖ ರುವಾರಿಗಳಾಗಿ ಹೊರಹೊಮ್ಮಿದರು. ಅಲೆಕ್ಸ್ ಹೇಲ್ಸ್ 47 ಎಸೆತದಲ್ಲಿ 86 ರನ್ ಗಳಿಸಿದರೆ, ಜೋಸ್ ಬಟ್ಲರ್ ಎದುರಿಸಿದ 49 ಎಸೆತದಲ್ಲಿ 80 ರನ್ ಗಳಿಸಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಆಟಗಾರರು, ನಿಗದಿತ 20 ಓವರ್’ನಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಸಂಪಾದಿಸಿ ಗಮನ ಸೆಳೆದಿದ್ದರು.
ಇಂಗ್ಲೆಂಡ್ ತಂಡದ ಅಭೂತಪೂರ್ವ ಈ ಗೆಲುವಿನೊಂದಿಗೆ ನವೆಂಬರ್ 13ರಂದು ನಡೆಯುವ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.