ಚಿಕ್ಕಮಗಳೂರು: ಚಿಕ್ಕಮಗಳೂರಿನ ಶೃಂಗೇರಿಯ ಮಸೀದಿಯೊಂದರ ಮುಂದೆ ಕೇಸರಿ ಬಾವುಟ ಹಾರಿಸಿದ ಸಂಬಂಧ ಶ್ರೀರಾಮಸೇನೆಯ ಮುಖಂಡ ಮತ್ತು ಮಸೀದಿ ಆಡಳಿತ ಸಮಿತಿ ಸದಸ್ಯನ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ದತ್ತಮಾಲಾ ಅಭಿಯಾನ ಹಿನ್ನೆಲೆ ಶ್ರೀರಾಮ ಸೇನೆ ಕಾರ್ಯಕರ್ತರು ಮಸೀದಿಯ ಮುಂಭಾಗ ಬಾವುಟ ಕಟ್ಟಿದ್ದರು. ಈ ವಿಚಾರವಾಗಿ ಶ್ರೀರಾಮ ಸೇನೆ ಮುಖಂಡ ಅರ್ಜುನ್ ಮತ್ತು ಪಟ್ಟಣ ಪಂಚಾಯತ್ ಸದಸ್ಯ ರಫೀಕ್ ನಡುವೆ ತೀವ್ರ ವಾಗ್ವಾದ ಉಂಟಾಗಿ ನಂತರ ಘರ್ಷಣೆಗೆ ತಿರುಗಿತ್ತು.
ಗಲಾಟೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು ಇಬ್ಬರೂ ಶೃಂಗೇರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಲ್ಲೆ, ಜೀವ ಬೆದರಿಕೆ ಹಾಕಲಾಗಿದೆ ಎಂದು ಅರ್ಜುನ್ ದೂರು ದಾಖಲಿಸಿದ್ದ ಬೆನ್ನಲ್ಲೇ, ನನಗೂ ಸೂಕ್ತ ಭದ್ರತೆ ನೀಡಬೇಕು ಎಂದು ರಫೀಕ್ ಅಹ್ಮದ್ ಪ್ರತಿ ದೂರು ದಾಖಲಿಸಿದ್ದಾರೆ.
ಇಬ್ಬರ ವಿರುದ್ಧವೂ ಚಿಕ್ಕಮಗಳೂರು ಪೊಲೀಸರು ಪ್ರಕರಣ ದಾಖಲಿಸಿದ ನಂತರ ಎರಡೂ ಸಮುದಾಯಗಳ ಶಾಂತಿ ಸಭೆಯನ್ನು ಕರೆದಿದ್ದರು.