ನವದೆಹಲಿ: 2005 ರಿಂದ ತನಿಖೆ ನಡೆಸಿದ 83 ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಪ್ರಕರಣಗಳಲ್ಲಿ, ಕನಿಷ್ಠ 40 ಪ್ರಕರಣಗಳಿಗೆ 90 ದಿನಗಳ ಒಳಗೆ ಚಾರ್ಜ್ ಶೀಟ್ ಗಳನ್ನು ಸಲ್ಲಿಸಲಾಗಿದೆ ಎಂದು ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು 2005 ರಿಂದ ಆಗಸ್ಟ್ 7, 2022 ರವರೆಗೆ 98 ಯುಎಪಿಎ ಪ್ರಕರಣಗಳನ್ನು ದಾಖಲಿಸಿದ್ದರೂ, 15 ಎಫ್ ಐಆರ್ ಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಿದ್ದರು. ಉಳಿದ 83 ಪ್ರಕರಣಗಳ ಬಗ್ಗೆ ಮಾಹಿತಿ ಸಲ್ಲಿಸಿದ ಪೊಲೀಸರು, 40 ಪ್ರಕರಣಗಳು ಇತ್ಯರ್ಥವಾಗಿದ್ದು, 29 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಉಳಿದಿದೆ. ಅದರಲ್ಲೂ 14 ಯುಎಪಿಎ ಪ್ರಕರಣಗಳಲ್ಲಿ ತನಿಖೆ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನಿಖೆ ಬಾಕಿ ಇರುವ ಒಟ್ಟು 14 ಪ್ರಕರಣಗಳಲ್ಲಿ, 12 ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿಲ್ಲ, ಉಳಿದ ಎರಡರಲ್ಲಿ, ಬಂಧಿಸಲಾಗಿದೆ. ಆದರೆ ಆರಂಭಿಕ 90 ದಿನಗಳು ಇನ್ನೂ ಮುಗಿದಿಲ್ಲ ಎಂದು ಪೊಲೀಸರು ತಿಳಿಸಿದರು.
ಯುಎಪಿಎಯ ಸೆಕ್ಷನ್ 43 ಡಿ (2) (ಬಿ) ಅಡಿಯಲ್ಲಿ ರಿಮ್ಯಾಂಡ್ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಐದು ಮೇಲ್ಮನವಿಗಳ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, 90 ದಿನಗಳ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾದಂತಹ ಯುಎಪಿಎ ಪ್ರಕರಣಗಳ ಸಂಖ್ಯೆ ಮತ್ತು ವಿಸ್ತರಣೆ ಕೋರಿದ ಪ್ರಕರಣಗಳ ಬಗ್ಗೆ ದತ್ತಾಂಶವನ್ನು ಸಲ್ಲಿಸುವಂತೆ ಹೈಕೋರ್ಟ್ ಕಳೆದ ತಿಂಗಳು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಸೆಕ್ಷನ್ 43ಡಿ (2) ರ ಪ್ರಕಾರ, 90 ದಿನಗಳ ಅವಧಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಪ್ರಕರಣಗಳಲ್ಲಿ, ನ್ಯಾಯಾಲಯವು ಆರೋಪಿಗಳ ಬಂಧನದ ಅವಧಿಯನ್ನು 180 ದಿನಗಳವರೆಗೆ ವಿಸ್ತರಿಸಬಹುದು.
ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾದ ಅವಧಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಪೊಲೀಸರು, ಒಟ್ಟು 83 ಪ್ರಕರಣಗಳಲ್ಲಿ ಇದುವರೆಗೆ 74 ಪ್ರಕರಣಗಳನ್ನು ಮಾತ್ರ ಪರಿಶೀಲಿಸಲಾಗಿದೆ. ಅಲ್ಲದೆ 20 ಪ್ರಕರಣಗಳಲ್ಲಿ 90 ದಿನಗಳ ನಂತರ ಚಾರ್ಜ್ ಶೀಟ್ ಸಲ್ಲಿಸಲು ಸಮಯವನ್ನು ವಿಸ್ತರಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.