ಚೆನ್ನೈ: ಸಾಮಾಜಿಕವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇ.ಡಬ್ಲ್ಯೂ.ಎಸ್) ನೀಡಿದ ಮೀಸಲಾತಿಯನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್ ಆದೇಶವು ಸಾಮಾಜಿಕ ನ್ಯಾಯಕ್ಕಾಗಿ ಶತಮಾನಗಳಷ್ಟು ಹಳೆಯದಾದ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ಮುಂದಿನ ಕ್ರಮಗಳ ಕುರಿತು ನಿರ್ಧರಿಸಲು ಕಾನೂನು ತಜ್ಞರನ್ನು ಸಂಪರ್ಕಿಸುವುದಾಗಿ ಡಿ.ಎಂ.ಕೆ ಮುಖ್ಯಸ್ಥರು, ಮುಖ್ಯಮಂತ್ರಿ ಸ್ಟಾಲಿನ್ ಅವರು ತಿಳಿಸಿದ್ದಾರೆ.
ತೀರ್ಪಿನ ಸಂಪೂರ್ಣ ವಿಶ್ಲೇಷಣೆ ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಈ ಮೀಸಲಾತಿ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸಲು ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ತಮಿಳುನಾಡಿನ ಡಿಎಂಕೆ ಸರ್ಕಾರ ಈ ಪ್ರಕರಣದ ಕಕ್ಷಿದಾರರಲ್ಲಿ ಒಂದಾಗಿತ್ತು ಮತ್ತು ಸರ್ಕಾರಿ ಉದ್ಯೋಗಗಳಿಗೆ ಇಡಬ್ಲೂಎಸ್ ಕೋಟಾವನ್ನು ನೀಡದಿರುವ ನಿರ್ಧಾರವನ್ನು ತೆಗೆದುಕೊಂಡಿದೆ.
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ವರ್ಗಗಳಿಗೆ (EWS) 10% ಮೀಸಲಾತಿಯನ್ನು ಪರಿಚಯಿಸಿದ 103ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಮ್ ಕೋರ್ಟ್ ಪೀಠವು 3:2 ಬಹುಮತದೊಂದಿಗೆ ಎತ್ತಿಹಿಡಿದಿತ್ತು.