ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಇಂದು ಮಹಾರಾಷ್ಟ್ರ ಪ್ರವೇಶಿಸಿದ್ದು, ಶಿವಸೇನೆಯ ನಾಯಕ ಬಾಳಾ ಠಾಕ್ರೆಯವರ ಮೊಮ್ಮಗ ಆದಿತ್ಯ ಠಾಕ್ರೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಠಾಕ್ರೆ ಬಣದ ಶಾಸಕ ಸಚಿನ್ ಅಹಿರ್ ನವೆಂಬರ್ 7ರ ಸೋಮವಾರ ಈ ಮಾಹಿತಿ ನೀಡಿದ್ದಾರೆ.
“ಮಗ ಹೋಗುತ್ತಾನೆ ಆದರೆ ನಾನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರುವ ಸಾಧ್ಯತೆ ಕಡಿಮೆ” ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಠಾಕ್ರೆ ಕುಟುಂಬ ಭಾರತ್ ಜೋಡೋದಲ್ಲಿ ಭಾಗವಹಿಸುತ್ತದೆಯೇ ಎಂಬ ಕುತೂಹಲ ಎಲ್ಲರದ್ದಾಗಿದೆ. ಶಾಸಕ ಸಚಿನ್ ಅಹಿರ್ ಅವರು ಆದಿತ್ಯ ಠಾಕ್ರೆ ಮತ್ತು ತಾವು ಕೆಲವರು ಭಾಗವಹಿಸುವ ಮಾಹಿತಿಯನ್ನು ನೀಡಿದ್ದಾರೆ.
ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆಯವರು ಭಾರತ್ ಜೋಡೋ ಯಾತ್ರೆಯಲ್ಲಿ ಶಿವಸೇನೆ ಖಂಡಿತ ಭಾಗವಹಿಸುತ್ತದೆ ಎಂದು ಹೇಳಿದ್ದಾರೆ. ಅದಕ್ಕೆ ಅಗತ್ಯದ ತಯಾರಿಯೂ ನಡೆದಿದೆ ಎಂದು ಈ ಸಂದರ್ಭದಲ್ಲಿ ಸಚಿನ್ ತಿಳಿಸಿದರು.
ಬಿಜೆಪಿ ಮತ್ತು ಶಿಂಧೆ ಬಣ ಸೋಲಿಸಲು ಮಹಾರಾಷ್ಟ್ರ ಅಘಾಡಿ ಬಲಯುತವಾಗಿರಬೇಕಾದ್ದು ಅಗತ್ಯ. ಈ ದೂರ ದೃಷ್ಟಿಯಿಂದಲೇ ಶಿವಸೇನೆಯು ಭಾರತ ಜೋಡೋ ಯಾತ್ರೆಯಲ್ಲಿ ಸೇರಲು ತೀರ್ಮಾನಿಸಿದೆ. ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್ ಸಿಪಿಯ ಕೆಲವು ಶಾಸಕರು ಮತ್ತು ಸಂಸದರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು.
ಸಮಾಜ, ದೇಶ ಮತ್ತು ಮನಸ್ಸುಗಳನ್ನು ಒಗ್ಗೂಡಿಸುವ ಗುರಿಯ ಭಾರತ್ ಜೋಡೋ ಯಾತ್ರೆಯಲ್ಲಿ ಈಗಾಗಲೇ ಹಲವು ಪಕ್ಷಗಳಿಗೆ ಸೇರಿದವರು ಹಲವು ಕಡೆ ಸೇರಿ ಹೆಜ್ಜೆ ಹಾಕಿದ್ದಾರೆ. ರಾಜಕೀಯ ಪಕ್ಷಗಳಿಗೆ ಸೇರದವರು ಸಹ ಹೆಜ್ಜೆ ಹಾಕಿದ್ದು ಯಾತ್ರೆಯ ವಿಶೇಷತೆಯಾಗಿದೆ. ಮಹಾರಾಷ್ಟ್ರದಲ್ಲೂ ಅದು ನಡೆಯುತ್ತದೆ ಎನ್ನುವುದು ರಾಜಕೀಯ ವೀಕ್ಷಕರ ಲೆಕ್ಕಾಚಾರ.
ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯು ನಾಂದೇಡ್, ಹಿಂಗೋಲಿ, ವಾಶಿಂ, ಅಕೋಲ, ಬುಲ್ದಾನ ಜಿಲ್ಲೆಗಳಲ್ಲಿ 14 ದಿನ 384 ಕಿಲೋಮೀಟರ್ ಗಳನ್ನು ಕ್ರಮಿಸಲಿದೆ. ರಾಹುಲ್ ಗಾಂಧಿಯವರು ಕೆಲವೆಡೆ ನಡೆಯುತ್ತ ಕೆಲವೆಡೆ ಕಾರಿನಲ್ಲಿ ಯಾತ್ರೆ ಮುಂದುವರಿಸಿದ್ದಾರೆ.