ಬೆಳ್ತಂಗಡಿ: ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವ ಬಿದ್ದು, ತಲೆ ಹಿಂಬದಿ ಏಟಾಗಿ ರಕ್ತಸ್ರಾವವಾಗಿದ್ದರೂ, ಶಿಕ್ಷಕರು ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ, ತಾವೂ ಪ್ರಥಮ ಚಿಕಿತ್ಸೆ ಮಾಡದೆ ವಿದ್ಯಾರ್ಥಿಗಳಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಘಟನೆಯೊಂದು ತಾಲೂಕಿನ ತೋಟತ್ತಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಆಟವಾಡುತ್ತಿದ್ದ 4 ನೇ ತರಗತಿಯ ಬಾಲಕನೋರ್ವ ನ. 4ರಂದು ಬಿದ್ದು ತಲೆಗೆ ಏಟಾಗಿದ್ದು, ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಬದಲಾಗಿ ಮಕ್ಕಳಿಂದಲೇ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡ ವಿದ್ಯಾರ್ಥಿಗೆ ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಲು ಮುಂದಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳೇ ಪ್ರಥಮ ಚಿಕಿತ್ಸೆ ನೀಡುತ್ತಿರುವ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆಗೆ ಬಗ್ಗೆ ಮಾತನಾಡಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ, ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಮಗು ಆರೋಗ್ಯವಾಗಿದೆ. ಸಿ.ಆರ್.ಪಿ.ಗಳು ಶಾಲೆಗೆ ಭೇಟಿ ನೀಡಿದ್ದಾರೆ. ಶಿಕ್ಷಕರು ಈ ರೀತಿ ವರ್ತಿಸಬಾರದಿತ್ತು. ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ
ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ಸಭೆ ನಡೆಸಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಶಿಕ್ಷಕರು ತಿಳಿಸಿದ್ದಾರೆ.