ನವದೆಹಲಿ: ರದ್ದಾದ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕನನ್ನು ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ತನಿಖಾ ಏಜೆನ್ಸಿಯು ದೇವೇಂದ್ರ ಶರ್ಮಾ ಅವರನ್ನು ವಿಚಾರಣೆ ನಡೆಸುತ್ತಿದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಮನೀಶ್ ಸಿಸೋಡಿಯಾ, ಇಡಿ ಸುಳ್ಳು ಪ್ರಕರಣದ ಮೂಲಕ ನನ್ನ ಮನೆ ಮೇಲೆ ದಾಳಿ ಮಾಡಿದರು. ಬ್ಯಾಂಕ್ ಲಾಕರ್’ಗಳನ್ನು ಶೋಧಿಸಿದರು. ನನ್ನ ಗ್ರಾಮದಲ್ಲಿ ಪರಿಶೀಲನೆ ನಡೆಸಿದರು. ಆದರೆ ನನ್ನ ವಿರುದ್ಧ ಏನೂ ಪತ್ತೆಯಾಗಿಲ್ಲ. ಇಂದು ಅವರು ನನ್ನ ಆಪ್ತ ಸಹಾಯಕನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಕೂಡ ಏನನ್ನೂ ಪತ್ತೆಹಚ್ಚಿಲ್ಲ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇಡಿ ಇದುವೆರೆಗೂ ಹಲವು ದಾಳಿಗಳನ್ನು ನಡೆಸಿವೆ. ಸೆಪ್ಟೆಂಬರ್’ನಲ್ಲಿ ಇಂಡೋಸ್ಪಿರಿಟ್ ಎಂಬ ಮದ್ಯ ತಯಾರಿಕ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಲಾಗಿತ್ತು.