ಅಹ್ಮದಾಬಾದ್: ಮಾಜಿ ಆರೋಗ್ಯ ಸಚಿವರೂ ಆಗಿರುವ ಬಿಜೆಪಿಯ ಹಿರಿಯ ನಾಯಕ ಜಯ್ ನಾರಾಯಣ್ ವ್ಯಾಸ್ ಅವರು ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಾಟಣ್ ಜಿಲ್ಲೆಯಲ್ಲಿ ಪಕ್ಷ ಹಿರಿಯ ನಾಯಕ ನಾನು. ಆದರೆ ಇಲ್ಲಿಗೆ ಯಾರ್ಯಾರೋ ಬಂದು ಪಕ್ಷದ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ವ್ಯಾಸ್ ಆರೋಪಿಸಿದ್ದಾರೆ.
ನಾನು ಬಿಜೆಪಿ ಬಿಟ್ಟಿದ್ದೇನೆ. ಕಾಂಗ್ರೆಸ್ ಇಲ್ಲವೇ ಆಮ್ ಆದ್ಮಿ ಪಕ್ಷ ಸೇರುವುದಕ್ಕೆ ಮುಕ್ತ ಮನಸ್ಸು ಹೊಂದಿದ್ದೇನೆ ಎಂದು ವ್ಯಾಸ್ ಹೇಳಿದರು.
ಶನಿವಾರ ಅಹ್ಮದಾಬಾದಿನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು “ನಾನು ಬಿಜೆಪಿಯಲ್ಲಿ ಯಾವಾಗಲೂ ದೂರು ಹೇಳುವವನಾಗಿಯೇ ಉಳಿಯಬೇಕಾದ ಸ್ಥಿತಿ ಬಂದಿತ್ತು. ಹಿರಿಯ ನಾಯಕನಾಗಿದ್ದು ಅದು ನೋವು ತರುವ ಸಂಗತಿಯಾಗಿದೆ. ಆದ್ದರಿಂದ ಪಕ್ಷ ತೊರೆದೆ” ಎಂದು ವ್ಯಾಸ್ ಹೇಳಿದರು.
ನಾನು ಈ ಬಾರಿಯೂ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಅದು ಕಾಂಗ್ರೆಸ್ ಆಗಿರಬಹುದು, ಎಎಪಿ ಆಗಿರಬಹುದು. ಈ ಬಗ್ಗೆ ಬೆಂಬಲಿಗರನ್ನು ಮಾತನಾಡುತ್ತೇನೆ. ಪಾಟಣ್ ಜಿಲ್ಲೆಯ ಸಿದ್ಪುರ ಕ್ಷೇತ್ರದ ಶಾಸಕರಾದ ಅವರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಮೊದಲಾದವರನ್ನು ಟೀಕಿಸಿದ್ದರು.
ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಸಿ. ಆರ್. ಪಾಟೀಲರನ್ನು ಹೊಗಳಿದ್ದರು.
“ನಾನು ಪಾಟೀಲರನ್ನು ಕಂಡಾಗಲೆಲ್ಲ ನನ್ನ ಸಮಸ್ಯೆ ಪರಿಹರಿಸಿದ್ದಾರೆ. ಆದರೆ ಸಣ್ಣ ಸಣ್ಣ ವಿಷಯಕ್ಕೆಲ್ಲ ಪಕ್ಷದ ಅಧ್ಯಕ್ಷರಲ್ಲಿಗೆ ಹೋಗುವುದು ಸರಿಯಾಗದು.” ಎಂದರು.
ಅಕ್ಟೋಬರ್ 29ರಂದು ವ್ಯಾಸ್ ಅವರು ರಾಜಸ್ತಾನ ಮುಖ್ಯಮಂತ್ರಿ ಮತ್ತು ಗುಜರಾತಿನಲ್ಲಿ ಕಾಂಗ್ರೆಸ್ ವೀಕ್ಷಕರಾಗಿರುವ ಅಶೋಕ್ ಗೆಹ್ಲೋಟ್ ರನ್ನು ಭೇಟಿಯಾಗಿದ್ದರು. ಅದು ರಾಜಕೀಯದಲ್ಲಿ ಒಂದಷ್ಟು ಗೊಂದಲ ಮತ್ತು ಕುತೂಹಲ ಹುಟ್ಟು ಹಾಕಿತ್ತು.