ಮರಾಠ ಸಮುದಾಯವನ್ನು ಹಿಂದುಳಿದ 2 ಎ ಗೆ ಸೇರ್ಪಡೆ ಮಾಡದಿದ್ದರೆ ಸುರ್ವಣ ಸೌಧಕ್ಕೆ ಮುತ್ತಿಗೆ: ಕ್ಷತ್ರೀಯ ಮರಾಠ ಮಹಾ ಒಕ್ಕೂಟ

Prasthutha|

►ರಾಜ್ಯಾದ್ಯಂತ ಬಿಜೆಪಿ ತಿರಸ್ಕರಿಸಿ ಅಭಿಯಾನ

- Advertisement -

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿವಿಧ ಸಮುದಾಯಗಳಿಂದ ಮೀಸಲಾತಿಗಾಗಿ ಬೇಡಿಕೆ ತೀವ್ರಗೊಂಡು ತೀವ್ರ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ಇದೀಗ ಮರಾಠ ಸಮುದಾಯವನ್ನು ಹಿಂದುಳಿದ ವರ್ಗ 2ಎ ಗೆ ಸೇರ್ಪಡೆ ಮಾಡಿ ಮೀಸಲಾತಿ ಸೌಲಭ್ಯ ಕಲ್ಪಿಸದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಭಾರೀ ಹೋರಾಟ ನಡೆಸುವುದಾಗಿ ಕರ್ನಾಟಕ ಕ್ಷತ್ರೀಯ ಮರಾಠ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಶಾಮ ಸುಂದರ್ ಗಾಯಕ್ವಾಡ್, ಮೀಸಲಾತಿ ಸೇರಿದಂತೆ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು. ದಶಕಗಳಿಂದ ನಮ್ಮ ಸಮುದಾಯವನ್ನು 2ಎ ಗೆ ಸೇರ್ಪಡೆ ಮಾಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ನಮ್ಮ ಈ ಮನವಿ ಪರಿಗಣಿಸಿ, ಅಧ್ಯಯನ ಮಾಡಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಶಂಕರಪ್ಪ ಅವರು  2012 ರಲ್ಲೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಇದುವರೆಗೆ ನಮ್ಮ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ಬಿ.ಜೆ.ಪಿ., ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮರಾಠ ಸಮಾಜದ ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಆಶ್ವಾಸನೆ ಈಡೇರಿಲ್ಲ. ಹೀಗಾಗಿ ಬಿ.ಜೆ.ಪಿಯನ್ನು ತಿರಸ್ಕರಿಸಿ ಎನ್ನುವ ಅಭಿಯಾನ ನಡೆಸಲಾಗುವುದು. ಮರಾಠ ಸಮಾಜ ಬಡತನದಲ್ಲಿದ್ದು, ರೈತರು, ವೀರಯೋಧರಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ನೆಲೆಸಿದ್ದಾರೆ. 20 ವರ್ಷಗಳಿಂದ ನಮ್ಮ ಬೇಡಿಕೆಗಳನ್ನು  ಕಾಂಗ್ರೆಸ್, ಬಿ.ಜೆ.ಪಿ, ಜೆಡಿಎಸ್ ಸರ್ಕಾರಗಳು ಈಡೇರಿಸಿಲ್ಲ. ಬಿ.ಜೆ.ಪಿ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ವಾಗ್ದಾನವನ್ನು ಬಿ.ಎಸ್.ಯಡಿಯೂರಪ್ಪ 24 ತಿಂಗಳು ಮುಖ್ಯಮಂತ್ರಿಯಾಗಿದ್ದರೂ ಈಡೇರಿಸಿಲ್ಲ. ಬಸವರಾಜ ಬೊಮ್ಮಾಯಿ 1 ವರ್ಷ ಕಳೆದರೂ ಯಾವುದೇ ಬೇಡಿಕೆಗಳು ಸಾಕಾರಗೊಂಡಿಲ್ಲ ಎಂದು ಹೇಳಿದರು.

ಇದೇ ವರ್ಷದ ಜುಲೈ 21-22 ರಂದು ಸಮಾಜದ ಮುಖಂಡರು ನಿಯೋಗದ ಮೂಲಕ ದೆಹಲಿಗೆ ತೆರಳಿ ಬಿ.ಜೆ.ಪಿ. ವರಿಷ್ಠರು ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಗೂ ಕವಡೆ ಕಾಸಿನ ಕಿಮ್ಮತ್ತು ದೊರೆತಿಲ್ಲ. ಇದರಿಂದ ಸಮಾಜ ಬಹಳ ನೊಂದಿದೆ. ಈ ಮಧ್ಯೆ ನಡೆದ ಉಪ ಚುನಾವಣೆಗಳಲ್ಲಿ ಮರಾಠ ಸಮಾಜ ಬಿಜೆಪಿಗೆ ಸರಿಯಾಗಿ ಬಿಜೆಪಿಗೆ ಬೆಂಬಲ ನೀಡಿಲ್ಲ. ಇದನ್ನು ಅರಿತು ಈ ಮಾಸಾಂತ್ಯದೊಳಗೆ ನಮ್ಮ ಬೇಡಿಕೆಗಳು ಈಡೇರಿಸಿದಿದ್ದರೆ ಡಿಸೆಂಬರ್ ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ 20 ಸಾವಿರಕ್ಕೂ ಹೆಚ್ಚು ಸಮಾಜದ ಮುಖಂಡರು, ಕಾರ್ಯಕರ್ತರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಬಿ.ಜೆ.ಪಿ. ಪಕ್ಷವನ್ನು ತಿರಸ್ಕರಿಸುವಂತೆ ಅಭಿಯಾನ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲಿದ್ದ ಶ್ರೀಮಂತ್ ಪಾಟೀಲರಿಗೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅವಕಾಶ ನೀಡಿಲ್ಲ. ಮುಂಬರುವ ಚುನಾವಣೆಯಲ್ಲಿ ಎರಡು ಲೋಕಸಭಾ ಹಾಗೂ 12 ವಿಧಾನಸಭೆ, ಎರಡು ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ಮರಾಠ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಬೇಡಿಕೆ ಈಡೇರಿಸದ ಪಕ್ಷದಲ್ಲಿ ನಮ್ಮ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ತಿರಸ್ಕರಿಸಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 50 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮರಾಠ ಸಮುದಾಯದ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕಿಳಿಸಿ ರಾಜಕೀಯವಾಗಿಯೂ ಸಹ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಮನೋಹರ್ ಕಡೋಲ್ಕರ್, ರಾಜ್ಯ ಉಪಾಧ್ಯಕ್ಷರಾದ ಬಾವು ಸಾಬ್ ಜಾಧವ್, ಮಂಗಳ ಕಶೀಕರ್, ಸುಮಿತ್ರಾ ಹುಬ್ಲಿ, ಧಶಶ್ರೀ ಸರ್ ದೇಸಾಯಿ, ಮೋಹನ್ ಜಾಧವ್, ರವಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp