ಕಾಸರಗೋಡು: ದೇವಸ್ಥಾನದ ವಿಗ್ರಹದಲ್ಲಿದ್ದ ಚಿನ್ನಾಭರಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರ ಮೂಲದ ದೀಪಕ್ ನಂಬೂದಿರಿ ಚಿನ್ನಾಭರಣ ಕದ್ದ ಆರೋಪಿ ಎಂದು ಗುರುತಿಸಲಾಗಿದೆ.
ದೀಪಕ್ ಚಿನ್ನಾಭರಣವನ್ನು ಮಾರಾಟ ಮಾಡಿದ್ದು, ಇದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 27 ರಿಂದ ದೀಪಕ್ ನನ್ನು ಪೂಜೆ ನೆರವೇರಿಸಲು ನೇಮಿಸಲಾಗಿತ್ತು. ಅ. 29 ರಂದು ಸಂಜೆ ಪೂಜೆಯ ಬಳಿಕ ಕಾವಲುಗಾರನಲ್ಲಿ ಹೊಸಂಗಡಿ ಪೇಟೆಗೆಂದು ತೆರಳಿದ್ದ ದೀಪಕ್ ನಂಬೂದಿರಿ ಬಳಿಕ ಮರಳಿ ಬಂದಿಲ್ಲ . ದೇವಸ್ಥಾನದ ಮೊಕ್ತೇಸರ ಕರೆ ಮಾಡಿದರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಬಳಿಕ ಪೂಜೆ ಮಾಡಲು ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿ ನಕಲಿ ಚಿನ್ನಾಭರಣ ಅಳವಡಿಸಿರುವುದು ಪತ್ತೆಯಾಗಿದೆ.