ಐಪಿಎಸ್ ಅಧಿಕಾರಿ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಂಎಸ್ ಧೋನಿ

Prasthutha|

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಐಪಿಎಸ್ ಅಧಿಕಾರಿ ಜಿ.ಸಂಪತ್ ಕುಮಾರ್ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮದ್ರಾಸ್ ಹೈಕೋರ್ಟ್ ಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

- Advertisement -

ತಮಿಳುನಾಡಿನ ಅಡ್ವಕೇಟ್ ಜನರಲ್ ಆರ್.ಷಣ್ಮುಗ ಸುಂದರಂ ಅವರು ಅಪರಾಧ ನ್ಯಾಯಾಲಯ ನಿಂದನೆ ಪ್ರಕರಣ ಮುಂದುವರಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಪಿ.ಎನ್.ಪ್ರಕಾಶ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ ಶುಕ್ರವಾರ ಪ್ರಕರಣದ ವಿಚಾರಣೆ ನಡೆದಿಲ್ಲ. ಮುಂದಿನ ಮಂಗಳವಾರಕ್ಕೆ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ.

ಧೋನಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಕ್ಕಾಗಿ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಮತ್ತು ಝೀ ಮೀಡಿಯಾ ಕಾರ್ಪೊರೇಷನ್ ವಿರುದ್ಧ 100 ಕೋಟಿ ರೂ. ಪರಿಹಾರ ನೀಡುವಂತೆ ಕೋರಲಾಗಿದೆ.

- Advertisement -

2013 ರಲ್ಲಿ ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ನಲ್ಲಿ ಧೋನಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ  ದೋಷಪೂರಿತ ಹೇಳಿಕೆ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆಕ್ಷೇಪಿಸಿ  ಸಂಪತ್ ಸೇರಿದಂತೆ, ಒಂದು ಟಿವಿ ಚಾನೆಲ್ ಕಂಪೆನಿ ಹಾಗೂ ಇನ್ನಿತರರ ವಿರುದ್ಧ ಧೋನಿ 2021ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆರಂಭದಲ್ಲಿ ಐಪಿಎಲ್ ಹಗರಣದ ತನಿಖೆ ನಡೆಸಿದ್ದ ಸಂಪತ್ ಅವರೂ ಸೇರಿದಂತೆ ಪ್ರತಿವಾದಿಗಳು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು ಎಂದು ಕೋರಿದ್ದರು. ಮಾನನಷ್ಟ ಉಂಟುಮಾಡುವಂತಹ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಆಗ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಸಂಪತ್ ಕುಮಾರ್ 2021ರ ಡಿಸೆಂಬರ್ 17ರಂದು ಸಲ್ಲಿಸಿದ ಹೆಚ್ಚುವರಿ ಲಿಖಿತ ಹೇಳಿಕೆಯಲ್ಲಿ ದೇಶದ ಅತ್ಯುನ್ನತ ಕೋರ್ಟ್ ಹಾಗೂ ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವುದು ಧೋನಿಯವರ ಆರೋಪವಾಗಿದೆ.



Join Whatsapp