ಚಿಕ್ಕಬಳ್ಳಾಪುರ : ಮುಜರಾಯಿ ಇಲಾಖೆಗೆ ಸೇರಿದ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಕಲ್ಯಾಣ ಮಂಟಪವನ್ನು ಪರಿಶಿಷ್ಟ ಜಾತಿಯವರ ವಿವಾಹಕ್ಕೆ ನೀಡಲು ನಿರಾಕರಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತಾಲೂಕಿನ ಬ್ರಾಹ್ಮಣರ ಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ವೆಂಕಟರಾಯಪ್ಪ ಅವರ ಪುತ್ರಿ ವೆಂಕಟಲಕ್ಷ್ಮಿ ಮತ್ತು ಬಾಗೇಪಲ್ಲಿಯ ಮಹೇಶ್ ಎಂಬವರ ವಿವಾಹವು ನವೆಂಬರ್ 3ರಂದು ನಿಶ್ಚಯವಾಗಿತ್ತು. ವಿವಾಹಕ್ಕೂ ಮೊದಲೇ ವಧುವಿನ ಸಹೋದರ ಆವುಲಕೊಂಡಪ್ಪ ದೇಗುಲದ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಲು ದೇವಾಲಯ ಸಮಿತಿಯ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪ ಬಳಿ ಕೋರಿದ್ದರು.
ನವೆಂಬರ್ 3ರಂದು ಬೇರೊಂದು ವಿವಾಹಕ್ಕೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಲಾಗಿದೆ ಎಂದು ವೆಂಕಟರಾಯಪ್ಪ ತಿಳಿಸಿದ್ದರು. ಆದರೆ ನವೆಂಬರ್ 3ರಂದು ವಧು, ವರ ಹಾಗೂ ಅವರ ಸಂಬಂಧಿಕರು ದೇವಾಲಯದ ಮುಂಭಾಗ ಮದುವೆ ಮಾಡಿಕೊಳ್ಳಲು ಬಂದಾಗ ದೇವಾಲಯ ಮತ್ತು ಕಲ್ಯಾಣ ಮಂಟಪಕ್ಕೆ ಬೀಗ ಹಾಕಲಾಗಿತ್ತು. ಯಾವುದೇ ಮದುವೆ ಸಮಾರಂಭ ನಡೆಯುತ್ತಿರಲಿಲ್ಲ ಎನ್ನಲಾಗಿದೆ.
ನಾವು ಪರಿಶಿಷ್ಟ ಜಾತಿಗೆ ಸೇರಿದ ಕಾರಣ ನಮಗೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಲು ನಿರಾಕರಿಸಲಾಗಿದೆ. ನವೆಂಬರ್ 3ರಂದು ಯಾವುದೇ ವಿವಾಹ ಇರಲಿಲ್ಲ. ಹೀಗಿದ್ದರೂ ನಮಗೆ ಸುಳ್ಳು ಹೇಳಿದ್ದಾರೆ. ದೇವಾಲಯ ಸಮಿತಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆವುಲಕೊಂಡಪ್ಪ ಗುಡಿಬಂಡೆ ತಹಶೀಲ್ದಾರ್ ಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ತಹಶೀಲ್ದಾರ್ ಸಿಗ್ಬತ್ ಉಲ್ಲಾ , ಈ ವಿಚಾರದಲ್ಲಿ ದೂರು ಬಂದಿದೆ. ದೇವಾಲಯಕ್ಕೆ ಸರ್ಕಾರದಿಂದ ಧರ್ಮದರ್ಶಿ ಮಂಡಳಿ ನೇಮಕವಾಗಿಲ್ಲ. ಗಣ್ಯರು ಸೇರಿ ದೇವಾಲಯದ ಅಭಿವೃದ್ಧಿ ಸಮಿತಿ ರಚಿಸಿಕೊಂಡಿದ್ದಾರೆ. ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರಿಗೆ ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅವರಿಂದ ಮಾಹಿತಿ ಬಂದ ನಂತರ, ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.