ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿಗೆ ಮೂವರು ಭಾರತೀಯರ ಹೆಸರು ನಾಮ ನಿರ್ದೇಶನ

Prasthutha|

ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಪುರುಷರ ವಿಭಾಗದಲ್ಲಿ ಮೂವರು ಕ್ರಿಕೆಟಿಗರ ಹೆಸರನ್ನು ಐಸಿಸಿ ಘೋಷಿಸಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ಹಾಗೂ ಝಿಬಾಬ್ವೆಯ ಆಲ್ರೌಡರರ್ ಸಿಕಂದರ್ ರಝಾ ಹೆಸರು ಪ್ರಶಸ್ತಿ ರೇಸ್’ನಲ್ಲಿದೆ.

- Advertisement -

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಪ್ರದರ್ಶನದ ಆಧಾರದ ಮೇಲೆ ಪುರುಷರ ವಿಭಾಗದಲ್ಲಿ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಮತ್ತು ಮಿಲ್ಲರ್ ಇದೇ ಮೊದಲ ಬಾರಿಗೆ ನಾಮನಿರ್ದೇಶಿತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ʻಐಸಿಸಿ ಆಗಸ್ಟ್ ತಿಂಗಳ ಆಟಗಾರʼ ಪ್ರಶಸ್ತಿ ಪಡೆದಿದ್ದ ಸಿಕಂದರ್ ರಝಾ, ಸತತ ಎರಡನೇ ತಿಂಗಳಲ್ಲೂ ಟಾಪ್-3 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಿಳಾ ವಿಭಾಗದಲ್ಲಿ ಭಾರತದ ಇಬ್ಬರು ಆಟಗಾತಿಯರು ಅಂತಿಮ ಮೂವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ಗಳಾದ ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಜೊತೆಗೆ ಪಾಕಿಸ್ತಾನದ ನಿದಾ ದಾರ್ ಅಕ್ಟೋಬರ್ ತಿಂಗಳ ಪ್ರಶಸ್ತಿ ರೇಸ್’ನಲ್ಲಿದ್ದಾರೆ.

- Advertisement -

ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಭಾರತದ ವನಿತೆಯರು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಈ ಟೂರ್ನಿಯಲ್ಲಿ ಅಮೋಘ ನಿರ್ವಹಣೆ ನೀಡಿದ್ದ ದೀಪ್ತಿ ಶರ್ಮಾ, ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ರಾಡ್ರಿಗಸ್ ಏಷ್ಯಾ ಕಪ್ ಟೂರ್ನಿಯ ಟಾಪ್ ಸ್ಕೋರರ್ ಆಗಿದ್ದರು.

ʻಸ್ವತಂತ್ರ ಐಸಿಸಿ ವೋಟಿಂಗ್ ಅಕಾಡೆಮಿʼ ಜೊತೆಗೆ ವಿಜೇತರನ್ನು ನಿರ್ಣಯಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. icc-cricket.com/awards ವೆಬ್ಸೈಟ್ಗೆ ಭೇಟಿ ನೀಡಿ ನೋಂದಾವಣಿ ಮಾಡಿದ ಬಳಿಕ ತಮ್ಮ ನೆಚ್ಚಿನ ಆಟಗಾರ/ಆಟಗಾತಿಗೆ ಮತ ಚಲಾಯಿಸಲು ಭಾನುವಾರದವರೆಗೂ ಅವಕಾಶ ನೀಡಲಾಗಿದೆ. ಮುಂದಿನ ವಾರ ವಿಜೇತರನ್ನು ಐಸಿಸಿ ಘೋಷಿಸಲಿದೆ.



Join Whatsapp