ಬೆಂಗಳೂರು: ಶಾಲೆ ಮುಗಿಸಿ ಮನೆಗೆ ಆಗಮಿಸುತ್ತಿದ್ದಾಗ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಸೂರ್ಯನಗರದ ಮಾಸ್ತೇನಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೆನ್ನಾಗರ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಚೇತನ್ (12) ಹಾಗೂ ಜಗದೀಶ್ (12) ಮೃತ ವಿದ್ಯಾರ್ಥಿಗಳಾಗಿದ್ದಾರೆ.
ಶಾಲೆ ಮುಗಿಸಿಕೊಂಡು ಆಟವಾಡಲು ತೆರಳಿದ್ದು ಇವರಿಬ್ಬರೂ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಬಾಲಕರು ಹೆನ್ನಾಗರ ದಿಣ್ಣೆ (ಎಚ್ ಹೊಸಹಳ್ಳಿ) ಯಲ್ಲಮ್ಮ ದೇವಿ ದೇವಾಲಯದ ಸಮೀಪವಿರುವ ವಸಂತ್ ಮತ್ತು ಚಂದ್ರಿಕಾ ಎಂಬುವರ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದ ಸುತ್ತ ಬೇಲಿ ಹಾಕಿರಬೇಕು ಮತ್ತು ಗಾಳಿ ತುಂಬಿದ ಟ್ಯೂಬ್ ಗಳನ್ನು ನೀರಿನಲ್ಲಿ ಹಾಕಿರಬೇಕೆಂಬ ನಿಯಮವಿದ್ದರೂ ಜಮೀನಿನ ಮಾಲೀಕ ವಸಂತ್ ನಿರ್ಲಕ್ಷ್ಯ ವಹಿಸಿರುವುದೇ ಮಕ್ಕಳ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿ ಮೂಲದಿಂದ ಕೂಲಿಗೆಂದು ಬಂದಿದ್ದ ಈ ಇಬ್ಬರು ಬಾಲಕರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡದೇ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಎಚ್ ಹೊಸಹಳ್ಳಿ ಯುವಕರು ವಿಡಿಯೋಗಳನ್ನು ಮಾಧ್ಯಮಕ್ಕೆ ರವಾನಿಸಿದ ಬೆನ್ನಲ್ಲೇ ಎಚ್ಚೆತ್ತ ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ, ದೂರು ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಗ್ರಾಮಾಂತರ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದರು.