ಮುಂಬೈ: ಹಣೆಗೆ ‘ಬಿಂದಿ’ ಹಾಕದ ಕಾರಣಕ್ಕೆ ಬಲಪಂಥೀಯ ನಾಯಕ ಸಂಭಾಜಿ ಭಿಡೆ ಮಹಿಳಾ ವರದಿಗಾರ್ತಿಯೊಂದಿಗೆ ಮಾತನಾಡಲು ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ಭಿಡೆ ಅವರಿಗೆ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾದ ನಂತರ ಈ ಘಟನೆ ನಡೆದಿದ್ದು, ಈ ಹಿನ್ನೆಲೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಬಲಪಂಥೀಯ ನಾಯಕನ ಹೇಳಿಕೆಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಶಿಂಧೆ ಅವರೊಂದಿಗಿನ ಭೇಟಿಯ ಬಗ್ಗೆ ತನ್ನಿಂದ ಹೇಳಿಕೆ ನೀಡುವಂತೆ ಮಾಧ್ಯಮ ಮಹಿಳಾ ವರದಿಗಾರ್ತಿ ಕೇಳಿದ್ದಕ್ಕೆ ಭಿಡೆ ಅವರು, ಹೇಳಿಕೆ ಪಡೆಯುವ ಮುನ್ನ ‘ಬಿಂದಿ’ಯನ್ನು ಯಾಕೆ ಇಟ್ಟುಕೊಂಡಿಲ್ಲ ಎಂದು ಕೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಒಬ್ಬ ಮಹಿಳೆ ಭಾರತ ಮಾತೆಗೆ ಸಮಾನಳಾಗಿದ್ದಾಳೆ. ಬಿಂದಿ ಇಡದೇ ‘ವಿಧವೆ’ ಯಂತೆ ಕಾಣಿಸಿಕೊಳ್ಳಬಾರದು ಎಂದು ಅವರು ಪತ್ರಕರ್ತರಿಗೆ ಹೇಳಿದ್ದಾರೆ.
2018ರಲ್ಲಿ ಭಿಡೆ ಅವರು ತಮ್ಮ ತೋಟದ ಮಾವಿನ ಹಣ್ಣುಗಳನ್ನು ತಿಂದರೆ ದಂಪತಿಗಳಿಗೆ ಸಂತಾನವಾಗಲಿದೆ ಎಂದು ಹೇಳಿದ್ದು ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.