ಗುಜರಾತ್ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಅಹಮದಾಬಾದ್: ಸಮಾನ ಸಿವಿಲ್ ಕೋಡ್ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈ ಕಾನೂನು ಜಾರಿಗೆ ತರಲು ಸಮಿತಿ ರಚಿಸುವ ಬಿಜೆಪಿ ಸರ್ಕಾರದ ನಿರ್ಧಾರದಿಂದ ಜನರು ಹಾದಿ ತಪ್ಪಿಸಲು ಸಾಧ್ಯವಿಲ್ಲ. ಇದು ಜನರನ್ನು ಮೋಸಗೊಳಿಸುವ ಕುತಂತ್ರ ಎಂದು ಗುಜರಾತ್ ಕಾಂಗ್ರೆಸ್ ಸಮಿತಿ ಕಿಡಿಕಾರಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್’ನ ಹಿರಿಯ ನಾಯಕ ಅರ್ಜುನ್ ಮೊದ್ವಾಡಿಯಾ, ವಿಧಾನಸಭೆ ಚುನಾವಣೆಗೆ ಮುನ್ನ ಇದೊಂದು ಗಿಮಿಕ್ ಎಂದು ಬಣ್ಣಿಸಿದ್ದಾರೆ ಮತ್ತು ಇಂತಹ ಕಾನೂನು ರೂಪಿಸುವ ಅಧಿಕಾರ ರಾಜ್ಯ ಶಾಸಕಾಂಗ ಸಭೆಗೆ ಇಲ್ಲ ಎಂದು ತಿಳಿಸಿದ್ದಾರೆ.
ಭೂಪೇಂದ್ರ ಪಟೇಲ್ ಸರ್ಕಾರವು ಸಮಾನ ಸಿವಿಲ್ ಕೋಡ್ ಅನ್ನು ಅನುಷ್ಠಾನಗೊಳಿಸುವ ವಿಧಾನಗಳನ್ನು ಅಧ್ಯಯನ ಮಾಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸಲಾಗುವುದು ಎಂದು ಹಿಂದಿನ ದಿನ ಘೋಷಿಸಿತ್ತು.
“ಸರ್ಕಾರದ ವೈಫಲ್ಯದಿಂದಾಗಿ ಹಣದುಬ್ಬರ, ನಿರುದ್ಯೋಗ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರನ್ನು ದಾರಿ ತಪ್ಪಿಸುವ ಗುರಿಯ ಉದ್ದೇಶವನ್ನಿಟ್ಟು ಈ ಗಿಮಿಕ್ ಮಾಡಲಾಗಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರ ಕೇಂದ್ರದಲ್ಲಿದೆ. ವೈಯಕ್ತಿಕ ಕಾನೂನುಗಳನ್ನು ಸಂಸತ್ತು ಅಂಗೀಕರಿಸಿದೆ ಮತ್ತು ಗುಜರಾತ್ ವಿಧಾನಸಭೆಗೆ ಈ ಕಾನೂನನ್ನು ರೂಪಿಸುವ ಅಧಿಕಾರವಿಲ್ಲ’’ ಎಂದು ಮೊದ್ವಾಡಿಯಾ ತಿಳಿಸಿದ್ದಾರೆ.
ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಎಂಟು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಮಾನ ಸಿವಿಲ್ ಕೋಡ್’ನ ನಿರ್ಧಾರಕ್ಕೆ ಅರ್ಥವಿಲ್ಲ ಎಂದು ಅವರು ತಿಳಿಸಿದರು.
ಯುವಕರು, ರೈತರು, ದನಗಾಹಿಗಳು ಮತ್ತು ಸಮಾಜದ ಇತರ ಎಲ್ಲ ವರ್ಗಗಳನ್ನು ಹತಾಶರನ್ನಾಗಿಸಿರುವ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿರುವುದರಿಂದ ಬಿಜೆಪಿ ಈ “ಟ್ರಿಕ್” ಅನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.