ಮಂಗಳೂರು | ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು: ಕಾಂಗ್ರೆಸ್, SDPI ಆಕ್ಷೇಪ ದಾಖಲಿಸಿ ನಿರ್ಣಯ ಅಂಗೀಕಾರ

Prasthutha|

ಮಂಗಳೂರು: ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರನ್ನಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್, sdpi ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು ಸಾಮಾನ್ಯ ಸಭೆಯು ಗದ್ದಲಕ್ಕೆ ಕಾರಣವಾಯಿತು.

- Advertisement -

SDPI ಮತ್ತು ಕಾಂಗ್ರೆಸ್ ಸದಸ್ಯರ ಆಕ್ಷೇಪದ ಹೊರತಾಗಿಯೂ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು ಇಡುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ಪ್ರಸ್ತಾಪವನ್ನು ಪಾಲಿಕೆಯ ಹಿಂದಿನ ಸಾಮಾನ್ಯ ಸಭೆಯ ಕಾರ್ಯಸೂಚಿಗೆ ಸೇರಿಸಲಾಗಿದ್ದು, ಈ ಸಂಬಂಧ ಚರ್ಚೆಗೆ ಅವಕಾಶವನ್ನು ನೀಡಲಾಗಿಲ್ಲ ಎಂದು ಪ್ರತಿಪಕ್ಷಗಳು ದೂರಿದ್ದವು. ಈ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಆ ನಿರ್ಣಯವನ್ನು ಖಚಿತಪಡಿಸುವ ಮೊದಲು ಕಾಂಗ್ರೆಸ್ ಪಕ್ಷದ ವಿರೋಧವನ್ನು ಉಲ್ಲೇಖಿಸಬೇಕೆಂದು ವಿಪಕ್ಷ ನಾಯಕ ನವೀನ್ ಡಿಸೋಜಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಎಸ್ ಡಿಪಿಐ ಸದಸ್ಯರಾದ ಸಂಶಾದ್ ಅಬೂಬಕ್ಕರ್, ಮುಜೀಬ್ ಬೆಂಗ್ರೆ ಅವರು ಪಾಲಿಕೆಯ ಪ್ರಸ್ತಾಪವನ್ನು ವಿರೋಧಿಸಿ ಘೋಷಣೆ ಕೂಗಿದರು.

ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ಪ್ರಸ್ತಾಪಕ್ಕೆ ನಮ್ಮ ತೀವ್ರ ವಿರೋಧವಿದೆ, ನಮ್ಮ ಆಕ್ಷೇಪವನ್ನೂ ನಿರ್ಣಯದಲ್ಲಿ ದಾಖಲಿಸಬೇಕು ಎಂದು ಎಸ್ ಡಿಪಿಐ ಸದಸ್ಯರಾದ ಸಂಶಾದ್ ಅಬೂಬಕ್ಕರ್, ಮುನೀಬ್ ಬೆಂಗ್ರೆ ಒತ್ತಾಯಿಸಿದರು.

ಕಾಂಗ್ರೆಸ್ ಸದಸ್ಯ ಅಬ್ದುಲ್ ರವೂಫ್ ಮಾತನಾಡಿ, ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕೊನೆಯ ಕ್ಷಣದ ಕಾರ್ಯಸೂಚಿಯನ್ನು ಒಪ್ಪಬಹುದು. ಆದರೆ ಇಂತಹ ಕ್ಷುಲ್ಲಕ ವಿಚಾರವನ್ನು ಕೊನೆಯ ಕ್ಷಣದ ಕಾರ್ಯಸೂಚಿಗೆ ಸೇರಿಸುವುದು ಸರಿಯಲ್ಲ ಎಂದರಲ್ಲದೆ, ಆಡಳಿತ ಪಕ್ಷದ ನಡೆಯನ್ನು ಖಂಡಿಸಿದರು.

ಈ ವಿಚಾರವಾಗಿ ಮಾತನಾಡಿದ ಪಾಲಿಕೆಯ ಆಡಳಿತ ಪಕ್ಷದ ಸಚೇತಕ ಪ್ರೇಮಾನಂದ ಶೆಟ್ಟಿ, ಕಾಂಗ್ರೆಸ್ ಪಕ್ಷದ ಸದಸ್ಯರು ಈ ಹಿಂದೆ ಯಾವುದೇ ಸಭೆಯಲ್ಲಿ ವಿರೋಧ ವ್ಯಕ್ತಪಡಿಸದೇ ಸುಮ್ಮನಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

ಈ ಮಧ್ಯೆ ಬಿಜೆಪಿ ಸದಸ್ಯ ಸುದೀರ್ ಶೆಟ್ಟಿ ಕಣ್ಣೂರು, ನೀವು ವಿರೋಧ ಮಾಡಿ ಅಥವಾ ಬಿಡಿ. ನಾವು ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರನ್ನು ಇಡುವುದ ಶತಃಸಿದ್ಧ ಎಂದು ತಿಳಿಸಿದರು. ಇದು ಉಭಯ ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.

ಪಾಲಿಕೆಯ ಈ ನಿರ್ಣಯಕ್ಕೆ ವಿರೋಧ ದಾಖಲಿಸಲು ಮೇಯರ್ ಜಯಾನಂದ ಅವರು ಒಪ್ಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು, ಎಸ್ ಡಿಪಿಐ ಸದಸ್ಯರು ಮೇಯರ್ ಪೀಠದ ಮುಂಭಾಗದಲ್ಲಿ ಧರಣಿ ನಡೆಸಿದರು. ತೀವ್ರ ಗದ್ದಲದಿಂದಾಗಿ ಮೇಯರ್ ಅವರು ಸಭೆಯನ್ನು ಅಲ್ಪಾವಧಿಗೆ ಮುಂದೂಡಿದರು.

ಸಭೆ ಪುನಾರಂಭವಾದಾಗ, ಇದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ಎಲ್ಲಾ ಸದಸ್ಯರ ವಿರೋಧವನ್ನು ದಾಖಲಿಸಿ ಪ್ರಸ್ತಾವವನ್ನು ಅಂಗೀಕರಿಸುವುದಾಗಿ ತಿಳಿಸಿದರು.

ಬಳಿಕ ಎಸ್ ಡಿಪಿಐ, ಕಾಂಗ್ರೆಸ್ ಸದಸ್ಯರ ಆಕ್ಷೇಪ ದಾಖಲಿಸಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ನಿರ್ಣಯ ಅಂಗೀಕರಿಸಲಾಯಿತು



Join Whatsapp